ವಿಶ್ವದ ಗಮನ ಸೆಳೆದಿರುವ ಬೆಂಗಳೂರಿನಲ್ಲಿ ಅಪರಾಧ ನಡೆಯದಂತೆ ಎಚ್ಚರವಹಿಸಿ: ಬಿಎಸ್ವೈ ಸೂಚನೆ - kannada news
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಿದ್ದಾರೆ. ವಿಶ್ವದ ಗಮನ ಸೆಳೆದಿರುವ ಬೆಂಗಳೂರಿನಲ್ಲಿ ಹೆಚ್ಚು ಅಪರಾಧ ನಡೆಯದಂತೆ ಎಚ್ಚರವಹಿಸಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬಿಎಸ್ವೈ ಸೂಚನೆ ನೀಡಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪ
ಬೆಂಗಳೂರು:ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಮಾತುಕತೆ ನಡೆಸಿದ್ದಾರೆ.
ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸಿಎಂ ಸೂಚನೆ:
ರಾಜ್ಯದಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಕಟ್ಟೆಚ್ಚರ ವಹಿಸಬೇಕು . ಬೆಂಗಳೂರಿನ ಬಗ್ಗೆ ಇಡೀ ಜಗತ್ತು ಗಮನಹರಿಸುತ್ತದೆ. ನಗರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾ ವಹಿಸಬೇಕು. ವಿಶ್ವಮಟ್ಟದ ತಂತ್ರಜ್ಞಾನ ಬಳಸಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಬೇಕು. ಅಪರಾಧ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ರಾತ್ರಿ 8.00 ರಿಂದ ಬೆಳಿಗ್ಗೆ 6.00 ಗಂಟೆಯವರೆಗೆ ಗಸ್ತು ತಿರುಗುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಖಾಲಿ ಹುದ್ದೆ ಭರ್ತಿ:
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 25,174 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಮುಖ್ಯಮಂತ್ರಿಗಳು, ನಿರ್ಮಾಣ ಹಂತದಲ್ಲಿರುವ ಪೊಲೀಸರ ವಸತಿಗೃಹಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪೊಲೀಸ್ ಡಿಜಿ ನೀಲಮಣಿ ಎನ್. ರಾಜು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳಾದ ಸುನೀಲ್ ಕುಮಾರ್, ಹರಿಶೇಖರನ್, ಪ್ರವೀಣ್ ಸೂದ್, ಹೇಮಂತ್ ನಿಂಬಾಳ್ಕರ್, ಭಾಸ್ಕರ್ ರಾವ್, ಎನ್.ಎಸ್.ಮೇಘರಿಕ್, ಪಿ.ಬಿ.ಸಂಧು, ಹಿತೇಂದ್ರ, ಕಮಲ್ ಪಂತ್, ಪರಮಶಿವಮೂರ್ತಿ ಹಾಗೂ ಮಾಲಿನಿ ಕೃಷ್ಣ ಮೂರ್ತಿ ಭಾಗಿಯಾಗಿದ್ದರು.
Last Updated : Aug 1, 2019, 9:05 PM IST