ಬೆಂಗಳೂರು:ರಾಜ್ಯದಲ್ಲಿ ಇಂದಿನಿಂದ 14 ದಿನ ಲಾಕ್ಡೌನ್ ಜಾರಿಯಾಗಿದ್ದು, ಮೊದಲ ದಿನವಾದ ಇಂದು ಇಡೀ ದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರಂತರವಾಗಿ ಕೋವಿಡ್ ಸಂಬಂಧಿತ ಚಟುವಟಿಕೆಯಲ್ಲೇ ನಿರತರಾಗಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಲಿರುವ ಸಿಎಂ, ಇಂದಿನಿಂದ ಜಾರಿಯಾಗಿರುವ ಟಫ್ ರೂಲ್ಸ್ ಅನುಷ್ಠಾನಕ್ಕೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ, ಅಗತ್ಯ ವಸ್ತುಗಳ ಸರಬರಾಜಿಗೆ ಕಲ್ಪಿಸಿರುವ ವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ. ಕೋವಿಡ್ ನಿರ್ವಹಣೆಗೆ ಇರುವ ಸವಾಲು, ಸಮಸ್ಯೆಗಳ ಕುರಿತು ಅವಲೋಕಿಸಿ ಪರಿಹಾರಕ್ಕೆ ಸಲಹೆ ಸೂಚನೆ ನೀಡಲಿದ್ದಾರೆ.
ನಂತರ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಲಿರುವ ಸಿಎಂ, ಆಯಾ ಜಿಲ್ಲೆಯಲ್ಲಿ ಲಾಕ್ಡೌನ್ ಪರಿಣಾಮಕಾರಿ ಅನುಷ್ಠಾನಕ್ಕೆ ತಂದಿರುವ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ. ಅನಗತ್ಯವಾಗಿ ಜನರು ಓಡಾಡುತ್ತಿರುವುದನ್ನು ನಿಯಂತ್ರಿಸದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದರೆ ಸಂಬಂಧಿಸಿದ ಉಸ್ತುವಾರಿ ಸಚಿವರಿಗೆ ಸಿಎಂ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಅನಗತ್ಯ ಸಂಚಾರಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದಲೂ ಇಡೀ ರಾಜ್ಯದ ಕಾನೂನು ಸುವ್ಯವಸ್ಥೆ, ಲಾಕ್ಡೌನ್ ಜಾರಿಗೆ ಪೊಲೀಸ್ ಇಲಾಖೆ ಏನೆಲ್ಲಾ ಕಠಿಣ ಕ್ರಮ ಕೈಗೊಂಡಿದೆ ಎನ್ನುವ ಕುರಿತು ಮಾಹಿತಿ ಪಡೆಯಲಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಂದಲೂ ಸಿಎಂ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಸಂಜೆ 4.30ಕ್ಕೆ ಮೆಟ್ರೋ 2ಎ, 2ಬಿ ಯೋಜನೆಗೆ ಅನುಮೋದನೆ ಪಡೆಯುವ ಕುರಿತು ವರ್ಚುವಲ್ ಸಭೆಯಲ್ಲಿ ಭಾಗಿಯಾಗಲಿರುವ ಸಿಎಂ ಯಡಿಯೂರಪ್ಪ, ಸಂಜೆ 6 ಗಂಟೆಗೆ ಕೋವಿಡ್ ನಿರ್ವಹಣೆ ಜವಾಬ್ದಾರಿ ಹೊತ್ತ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣದ ಸ್ಥಿತಿಗತಿ, ಆಕ್ಸಿಜನ್ ಸಮಸ್ಯೆ, ರೆಮ್ಡಿಸಿವಿರ್ ಔಷಧ ಪೂರೈಕೆಯಲ್ಲಿನ ವ್ಯತ್ಯಯ, ಬೆಡ್ ಕೊರತೆ ಕುರಿತು ಸಮಾಲೋಚನೆ ಜೊತೆಗೆ ಮೊದಲ ದಿನದ ಲಾಕ್ಡೌನ್ ಕುರಿತು ಅವಲೋಕನ ನಡೆಸಲಿದ್ದಾರೆ.