ನವದೆಹಲಿ/ಬೆಂಗಳೂರು:ರಾಜ್ಯದ ಅಭಿವೃದ್ಧಿ ಹಾಗೂ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ಪಡೆಯಲು ದೆಹಲಿಗೆ ಬಂದಿದ್ದು, ನಾಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕಲಬುರಗಿಯಿಂದ ನವದೆಹಲಿಗೆ ತೆರಳಿದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಬರಮಾಡಿಕೊಂಡರು. ಆರು ತಿಂಗಳ ಬಳಿಕ ದೆಹಲಿಗೆ ಆಗಮಿಸಿದ ಸಿಎಂ, ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರವಾಸದ ವಿವರ ನೀಡಿದರು.
ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾಮರಾಮನ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಯ ಕೊಟ್ಟಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸುತ್ತೇನೆ, ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ಸಮಯಾವಕಾಶ ಕೇಳಿದ್ದು, ಅವರ ಜೊತೆಯೂ ಮಾತುಕತೆ ನಡೆಸುತ್ತೇನೆ. ಜೊತೆಗೆ ಐದಾರು ಸಚಿವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದೇನೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಅಭಿವೃದ್ಧಿ ವಿಚಾರ ಮಾತನಾಡಲು ಹಾಗೂ ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಹೈಕಮಾಂಡ್ ಅನುಮತಿ ಪಡೆಯಲು ದೆಹಲಿಗೆ ಬಂದಿದ್ದೇನೆ. ಎರಡು ದಿನ ಹಲವು ಸಚಿವರನ್ನು ಭೇಟಿ ಮಾಡಿ ರಾಜ್ಯದ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಗಮನ ಸೆಳೆಯಲು ಪ್ರಯತ್ನಿಸಲಾಗುತ್ತದೆ. ಎರಡೂ ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಿಗಲಿದ್ದಾರೆ. ಇಂದು ಮತ್ತು ನಾಳೆ ಎರಡು ದಿನ ವಿಸ್ತಾರವಾಗಿ ರಾಜ್ಯದ ಅಭಿವೃದ್ಧಿ ಹಾಗೂ ಸಂಪುಟ ವಿಸ್ತರಣೆ ಕುರಿತು ಮಾತನಾಡಲಿದ್ದೇನೆ. ರಾಜ್ಯಕ್ಕೆ ಮರಳುವ ಮೊದಲು ಭೇಟಿಯ ಎಲ್ಲ ವಿವರವನ್ನು ನೀಡಲಿದ್ದೇನೆ ಎಂದು ತಿಳಿಸಿದರು.