ಬೆಂಗಳೂರು:ಕೋವಿಡ್ ಸೋಂಕಿನಿಂದ ಮನೆಗೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೊರೊನಾ ಸೋಂಕಿನಿಂದ ದುಡಿಯುವ ವ್ಯಕ್ತಿಗಳು ಮೃತಪಟ್ಟು ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಲ ಕುಟುಂಬಗಳು ಬೀದಿಪಾಲಾಗಿವೆ. ಇದನ್ನು ಮನಗಂಡು ಬಿಪಿಎಲ್ ಕುಟುಂಬದಲ್ಲಿ ಕೊರೊನಾದಿಂದ ವಯಸ್ಕರು ಅಥವಾ ದುಡಿಯುವ ವ್ಯಕ್ತಿ ಮೃತಪಟ್ಟಿದ್ದರೆ, ಅಂತಹ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 250 ರಿಂದ 300 ಕೋಟಿ ರೂ. ವಿನಿಯೋಗಿಸಲಾಗುತ್ತದೆ ಎಂದು ಸಿಎಂ ಹೇಳಿದರು.
ಹಾಲು ಕಲಬೆರಕೆಯ ಸಿಐಡಿ ತನಿಖೆ:ಮಂಡ್ಯ ಹಾಲು ಒಕ್ಕೂಟದಲ್ಲಿ ಹಾಲಿಗೆ ಕಲಬೆರಕೆ ಮಾಡಿದ್ದ ಸುದ್ದಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಘಟನೆಗೆ ಸಂಬಂಧಪಟ್ಟಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಮನ್ಮುಲ್ಗೆ ಹೊಸ ಎಂಡಿಯನ್ನು ನೇಮಕ ಮಾಡಲಾಗಿದೆ. ಪ್ರಕರಣದ ಸಿಐಡಿ ತನಿಖೆ ನಡೆಸುವುದಾಗಿ ತಿಳಿಸಿದರು.