ಬೆಂಗಳೂರು: ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಮತ್ತೆ ದೆಹಲಿ ಪ್ರವಾಸಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ನಿರ್ಧಾರ ಪ್ರಕಟಿಸಲಿದ್ದಾರೆ.
ಮೂರ್ನಾಲ್ಕು ದಿನದಲ್ಲಿ ಮತ್ತೆ ದೆಹಲಿಗೆ ತೆರಳಲಿರುವ ಸಿಎಂ: ಸಂಪುಟ ವಿಸ್ತರಣೆ ಕುರಿತು ಚರ್ಚೆ - ಸಂಪುಟ ವಿಸ್ತರಣೆ ಕುರಿತು ಚರ್ಚೆ
ವಿಧಾನಸಭೆ ಅಧಿವೇಶನ ಮುಕ್ತಾಯಗೊಂಡಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ದೆಹಲಿಗೆ ತೆರಳಲಿರುವ ಸಿಎಂ, ಸಂಪುಣ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅಧಿವೇಶನ ಮುಕ್ತಾಯವಾಗಿದೆ, ಸಂಪುಟ ವಿಸ್ತರಣೆ ಮಾಡಲು ಈಗ ಯಾವುದೇ ಸಮಸ್ಯೆ ಇಲ್ಲ. ಮೂರ್ನಾಲ್ಕು ದಿನಗಳಲ್ಲಿ ದೆಹಲಿಗೆ ತೆರಳುತ್ತೇನೆ. ವರಿಷ್ಠರ ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಮತ್ತೆ ಚರ್ಚೆ ನಡೆಸಲಿದ್ದೇನೆ. ಕೇಂದ್ರದ ನಾಯಕರ ಸಮ್ಮತಿ ಪಡೆದು ಸಂಪುಟ ವಿಸ್ತರಿಸಲಿದ್ದೇನೆ ಎಂದರು.
ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡಲು ಸಿಎಂ ಬಯಸಿದ್ದರು. ಈ ಸಂಬಂಧ ದೆಹಲಿಗೂ ಹೋಗಿ ಬಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಸಂಪುಟ ವಿಸ್ತರಣೆಗೆ ಅನುಮತಿ ಸಿಗುವ ನಿರೀಕ್ಷೆ ಹುಸಿಯಾಗಿತ್ತು. ಇದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯಾಗಿತ್ತು. ಇದೀಗ ಅಧಿವೇಶನ ಮುಗಿಯುತ್ತಿದ್ದಂತೆ ಮತ್ತೆ ಸಿಎಂ ಹೆಹಲಿಗೆ ತೆರಳುವ ಕುರಿತು ಮಾತನಾಡಿದ್ದು, ಸಚಿವಾಕಾಂಕ್ಷಿಗಳಲ್ಲಿ ಮತ್ತೆ ಕನಸು ಚಿಗುರೊಡೆದಿದೆ.