ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಹೇರಿಕೆ ಮಾಡಲಾಗಿರುವ ಲಾಕ್ಡೌನ್ ಬುಧವಾರ ಬೆಳಗ್ಗೆ 5ಗಂಟೆಗೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವರ ಜೊತೆ ಮಹತ್ವದ ಸಭೆ ನಡೆಸಿದರು. ಈ ವೇಳೆ ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಲಾಕ್ಡೌನ್ ಮುಂದುವರಿಕೆ ಮಾಡಲು ಸಾಧ್ಯವಿಲ್ಲ ಎಂದು ಬಿಎಸ್ವೈ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್ ಹೇರಿಕೆ ಮಾಡಲ್ಲ: ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ! - ಮುಖ್ಯಮಂತ್ರಿ ಬಿಎಸ್ವೈ
ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗುತ್ತಿರುವ ಕಾರಣ ಈಗಾಗಲೇ ವಾರಗಳ ಕಾಲ ಲಾಕ್ಡೌನ್ ಹೇರಿಕೆ ಮಾಡಲಾಗಿದ್ದು, ಅದು ಮುಕ್ತಾಯಗೊಳ್ಳಲು ಒಂದು ದಿನ ಬಾಕಿ ಇರುವಾಗಲೇ ಸಿಎಂ ಮಹತ್ವದ ಸಭೆ ನಡೆಸಿದರು.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಸಭೆಯಲ್ಲಿ ಎಸ್.ಟಿ ಸೋಮಶೇಖರ್, ಸುರೇಶ್ ಕುಮಾರ್, ಬೈರತಿ ಬಸವರಾಜ್, ಗೋಪಾಲಯ್ಯ ಸೇರಿದಂತೆ ಎಂಟು ವಲಯಗಳ ಉಸ್ತುವಾರಿ ಮತ್ತು ಸಿ.ಎಸ್ ವಿಜಯ್ ಭಾಸ್ಕರ್ ಭಾಗಿಯಾಗಿದ್ದರು. ಬುಧವಾರದ ವೇಳೆಗೆ ವಾರಗಳ ಕಾಲ ಹೇರಿಕೆ ಮಾಡಿರುವ ಬೆಂಗಳೂರು ಲಾಕ್ಡೌನ್ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ.ಈ ವೇಳೆ ಲಾಕ್ಡೌನ್ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಲಾಗಿದೆ. ಈ ವೇಳೆ ಲಾಕ್ಡೌನ್ ಬಿಟ್ಟು ಬೇರೆ ಮಾರ್ಗಸೂಚಿ ಅನುಸರಣೆ ಮಾಡಲು ಬಿಎಸ್ವೈ ಸೂಚನೆ ನೀಡಿದ್ದು,ಸಂಡೇ ಲಾಕ್ಡೌನ್ ಮುಂದುವರಿಸುವಂತೆ ತಿಳಿಸಿದ್ದಾರೆ. ನಾಳೆ, ನಾಡಿದ್ದು ಇದೇ ವಿಚಾರವಾಗಿ ಸರಣಿ ಸಭೆ ನಡೆಯಲಿವೆ.