ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಇಂದು ಸಿಎಂ ಯಡಿಯೂರಪ್ಪ ಆನ್ಲೈನ್ ಸಂವಾದ ನಡೆಸಿದರು. ಕೋವಿಡ್ ಗೆ ಪತಿ ಬಲಿಯಾದರೂ ಕೊರೊನಾ ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮುಂದುವರಿಸಿದ ಆತನ ಸತಿಯ ಕಾರ್ಯವೈಖರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಮಹಿಳೆಗೆ ಸಾಂತ್ವನ ಮತ್ತು ಧೈರ್ಯ ಹೇಳಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರ ಜೊತೆ ಸಿಎಂ ವಿಡಿಯೋ ಸಂವಾದದ ವೇಳೆ, ಬೆಂಗಳೂರಿನ ಭುವನೇಶ್ವರಿ ನಗರದ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿರಿಜಾ ಮಾತನಾಡುತ್ತಾ, ಕುಟುಂಬದ ಎಲ್ಲಾ ನಾಲ್ವರಿಗೂ ಕೋವಿಡ್ ಸೋಂಕು ತಗುಲಿತ್ತು. ನಾಲ್ವರೂ ಚಿಕಿತ್ಸೆ ಪಡೆದೆವು. ಅತ್ತೆ ಸೇರಿ ಮೂವರೂ ಹುಷಾರಾಗಿ ಮನೆಗೆ ಬಂದೆವು. ಆದರೆ ಪತಿ ಸಾವಿಗೀಡಾದರು ಎನ್ನುತ್ತಿದ್ದಂತೆ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರ ಕಣ್ಣಾಲಿಗಳು ತುಂಬಿ ಬಂದವು.
ಈ ವೇಳೆ ಕಂಬನಿ ಮಿಡಿದ ಸಿಎಂ, ಕೋವಿಡ್ ಸೋಂಕಿನಿಂದ ಪತಿಯ ವಿಯೋಗ ಹಾಗೂ ಇತ್ತೀಚೆಗಷ್ಟೇ ಕೋವಿಡ್ ನಿಂದ ಮುಕ್ತರಾಗಿರುವ ಅತ್ತೆ ಮತ್ತು ಮಗುವಿನ ನಡುವೆ ಎಲ್ಲವನ್ನೂ ಮರೆತು ಗಿರಿಜಾ ಅಂಗನವಾಡಿಯಲ್ಲಿ ಮತ್ತೆ ಕಾರ್ಯನಿರತರಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲೂ ಕಾರ್ಯತತ್ಪರತೆ ಮೆರೆದಿದ್ದಾರೆ ಎಂದು ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು. ಗಿರಿಜಾ ಅವರಿಗೆ ಸಾಂತ್ವನ ಮತ್ತು ಧೈರ್ಯ ಹೇಳಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ ಎಂದರು.
ಭಯವಿಲ್ಲದ ಜನರಿಗೆ ಅರಿವು ಮೂಡಿಸುವುದೇ ಸವಾಲು:
ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದ ಕೋಲಾರ ಜಿಲ್ಲೆಯ ಎರ್ರಂವಾರಿಪಲ್ಲಿಯ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಮ್ಮ ‘’ಜನರಿಗೆ ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ ಭಯವಿತ್ತು. ಎರಡನೇ ಅಲೆ ಮೊದಲನೇ ಅಲೆಗಿಂತ ತೀವ್ರವಾಗಿದ್ದರೂ ಕೂಡ ಭಯವೇ ಇಲ್ಲ. ಕೋವಿಡ್ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಸವಾಲಿನ ಕೆಲಸವಾಗಿದೆ. ಆದರೂ ಆಶಾ ಕಾರ್ಯಕರ್ತೆಯರ ಜೊತೆಗೂಡಿ ಈ ದಿಸೆಯಲ್ಲಿ ಪ್ರಯತ್ನಿಸಿ ಯಶಸ್ವಿಯಾಗುತ್ತಿದ್ದೇವೆ'' ಎಂದು ತಮ್ಮ ಪರಿಸ್ಥಿತಿಯನ್ನು ಹೇಳಿಕೊಂಡರು.