ಕರ್ನಾಟಕ

karnataka

ETV Bharat / state

ಶಿಕ್ಷಕರ ಕಚೇರಿ ಅಲೆದಾಟ ತಪ್ಪಿಸಲು 'ಶಿಕ್ಷಕ ಮಿತ್ರ ಆ್ಯಪ್' ಲೋಕಾರ್ಪಣೆ - ಶಿಕ್ಷಕ ಮಿತ್ರ ಆ್ಯಪ್​ ಲೋಕಾರ್ಪಣೆ ಮಾಡಿದ ಸಿಎಂ

'ಶಿಕ್ಷ ಮಿತ್ರ' ಆ್ಯಪ್​​ ಮೂಲಕ‌ ಶಿಕ್ಷಕರು ತಮ್ಮ ಸೇವಾ ವಿಷಯ ಹಾಗೂ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇದರಿಂದ ಶಿಕ್ಷಕರ ಕಚೇರಿ ಅಲೆದಾಟ ಕೊನೆಗೊಳ್ಳಲಿದೆ. ವರ್ಗಾವಣೆ ಪ್ರಕ್ರಿಯೆಯನ್ನೂ ಈ ಆ್ಯಪ್​ ಮೂಲಕವೇ ಮಾಡಲಾಗುತ್ತದೆ.

CM BSY Launched Shikshaka Mitra App
'ಶಿಕ್ಷಕ ಮಿತ್ರ ಆ್ಯಪ್' ಲೋಕಾರ್ಪಣೆ

By

Published : Aug 28, 2020, 6:26 PM IST

ಬೆಂಗಳೂರು : ಶಿಕ್ಷಕರ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸಿರುವ 'ಶಿಕ್ಷಕ ಮಿತ್ರ' ಆ್ಯಪ್​ನ್ನು ಸಿಎಂ ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.

ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ್ಯಪ್ ಲೋಕಾರ್ಪಣೆ ಮಾಡಲಾಯಿತು. ರಾಜ್ಯದಲ್ಲಿ ಸುಮಾರು 2.50 ಲಕ್ಷ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಶಿಕ್ಷಕರ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು ಶಿಕ್ಷಕ ಮಿತ್ರ ಆ್ಯಪ್​ ಅಭಿವೃದ್ಧಿಪಡಿಸಲಾಗಿದೆ. ಇದೇ ವೇಳೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬರೆದ 'ವಿದ್ಯಾ ವಿನೀತ' ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು.

ಲೋಕಾರ್ಪಣೆ ಬಳಿಕ ಮಾತನಾಡಿದ ಸಿಎಂ ಬಿಎಸ್​ವೈ, ಈ ಆ್ಯಪ್​​ ಮೂಲಕ‌ ಶಿಕ್ಷಕರು ತಮ್ಮ ಸೇವಾ ವಿಷಯ ಹಾಗೂ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇದರಿಂದ ಶಿಕ್ಷಕರ ಅಲೆದಾಟ ಕೊನೆಗೊಳ್ಳಲಿದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನೂ ಈ ಆ್ಯಪ್​ ಮೂಲಕವೇ ಮಾಡಲಾಗುತ್ತದೆ. ಸಚಿವ ಸುರೇಶ್ ಕುಮಾರ್ ಶಿಕ್ಷಕರ ವರ್ಗಾವಣೆ ನೀತಿಯನ್ನು ತರುವ ಮೂಲಕ ವರ್ಗಾವಣೆ‌ ಪ್ರಕ್ರಿಯೆಯನ್ನು ಸುಗಮಗೊಳಿಸಿದ್ದಾರೆ. ಅನೇಕ ವಿದ್ಯಾರ್ಥಿಗಳು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗಳಿಗೆ ಸೇರುತ್ತಿದ್ದಾರೆ. ಒಬ್ಬ ಸಚಿವರು ಹೇಗೆ ಜನಮುಖಿಯಾಗಿ ಕೆಲಸ ಮಾಡಬಹುದೆಂಬುದಕ್ಕೆ ಸುರೇಶ್ ಕುಮಾರ್ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಸೆಪ್ಟೆಂಬರ್​​ನಿಂದ ವರ್ಗಾವಣೆ ಪ್ರಕ್ರಿಯೆ ಆರಂಭ :

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ತಂದಿದ್ದೇವೆ. ಸೆಪ್ಟೆಂಬರ್​ನಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಒಂದು ವರ್ಷ ಬಹಳ ಸವಾಲಿನ ವರ್ಷ ಆಗಿತ್ತು. ಪ್ರವಾಹಕ್ಕೆ ಅನೇಕ ಶಾಲಾ ಕಟ್ಟಡ ಕೊಚ್ಚಿ ಹೋಗಿದ್ದವು. ಆದರೆ ಸಿಎಂ ಸಕಾಲಕ್ಕೆ ಆರ್ಥಿಕ ನೆರವು ನೀಡಿದರು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಕೊರೊನಾ ಮಧ್ಯೆ ಎಸ್​ಎಸ್​ಎಲ್‌ಸಿ‌ ಪರೀಕ್ಷೆ ನಡೆಸಿರುವುದು ಅತ್ಯಂತ ಹೆಮ್ಮೆ ತರುವ ಸಂಗತಿ. 8.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದೀಗ ನೀಟ್ ಪರೀಕ್ಷೆ ಮುಂದೂಡುವ ಬಗ್ಗೆ ಕೂಗು ಕೇಳಿ ಬರುತ್ತಿದೆ. ಮುಂದೂಡಿಕೆಗೆ ಆಗ್ರಹಿಸುತ್ತಿರುವವರು ಒಮ್ಮೆ ರಾಜ್ಯದಲ್ಲಿ ಎಸ್​ಎಸ್​ಎಲ್‌ಸಿ ಪರೀಕ್ಷೆ ಬರೆದ ನಮ್ಮ ವಿದ್ಯಾರ್ಥಿಗಳನ್ನು ನೋಡಲಿ ಎಂದರು. ಇನ್ನು ಮುಂದೆ ಒಂದೇ ಪರೀಕ್ಷಾ ಮಂಡಳಿ ಇರಲಿದೆ. ಎಸ್​ಎಸ್​ಎಲ್‌ಸಿ ಹಾಗೂ ಪಿಯುಸಿ ಪರೀಕ್ಷಾ ಮಂಡಳಿಗಳನ್ನು ವಿಲೀನ ಮಾಡಲಾಗುವುದು. ಆ ಮೂಲಕ ಏಕರೂಪ ಪರೀಕ್ಷಾ ಮಂಡಳಿಯನ್ನು ಜಾರಿಗೊಳಿಸಲಿದ್ದೇವೆ ಎಂದು ತಿಳಿಸಿದರು.

ಶಿಕ್ಷಕ ಮಿತ್ರ ಆ್ಯಪ್ ವಿಶೇಷತೆ ಏನು..?

ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಕೆಲಸಕ್ಕೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ 2019-20 ರ ಆಯವ್ಯಯದಲ್ಲಿ ಘೋಷಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಂತ್ರಜ್ಞಾನಾಧಾರಿತ ಶಿಕ್ಷಕ ಮಿತ್ರ ಆ್ಯಪ್​​ ಅಭಿವೃದ್ಧಿಪಡಿಸಿದೆ. ಶಿಕ್ಷಕರು ಮೊಬೈಲ್‍ನಲ್ಲಿ ಈ ಆ್ಯಪ್​ನ್ನು ಡೌನ್‍ಲೋಡ್ ಮಾಡಿಕೊಂಡು ತಾವು ಕುಳಿತಲ್ಲೇ ತಮ್ಮ ಸೇವಾ ವಿಷಯಗಳನ್ನು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಆ್ಯಪ್​ ಮೂಲಕ ನಿರ್ದಿಷ್ಟ ಸಮಸ್ಯೆಗಳನ್ನು ಇಂತಿಷ್ಟು ದಿನಗಳಲ್ಲಿ ಬಗೆಹರಿಸುವ ಬಗ್ಗೆ ಕಾಲಾವಧಿ ನಿಗದಿಪಡಿಸಲಾಗಿದೆ.

ABOUT THE AUTHOR

...view details