ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶತಮಾನೋತ್ಸವ ಭವನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು. ಡಿಸಿಎಂ ಗೋವಿಂದ ಕಾರಜೋಳ, ಲೋಕಸಭಾ ಸದಸ್ಯ ರಾಘವೇಂದ್ರ, ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸಾಥ್ ನೀಡಿದರು. ಇದೇ ವೇಳೆ, ಸಿಎಂ ಸರ್ಕಾರಿ ನೌಕರರ ಸಂಘದ ಬೈಲಾವನ್ನು ಸಹ ಉದ್ಘಾಟಿಸಿದರು.
13 ಕೋಟಿ ರೂ. ವೆಚ್ಚ:
ಬಳಿಕ ಸಿ.ಎಸ್ ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರ ಸಂಘದ ಕಟ್ಟಡವನ್ನು 13 ಕೋಟಿ ರೂ. ವೆಚ್ಚದಲ್ಲಿ ಒಂದು ವರ್ಷದಲ್ಲಿ ನಿರ್ಮಿಸಲಾಗಿದೆ. ಕೋವಿಡ್ನಿಂದಾಗಿ ಕಡಿಮೆ ಜನರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. 1920ರಲ್ಲೇ ಈ ಸಂಘ ಆರಂಭವಾಗಿತ್ತು. ರಾಜ್ಯದಲ್ಲಿ ಒಟ್ಟಾರೆ 6 ಲಕ್ಷ ನೌಕರರಿದ್ದಾರೆ. ಮೂಲ ಸೌಲಭ್ಯಕ್ಕೆ ಅತಿಹೆಚ್ಚು ಅನುದಾನ ಕೊಟ್ಟ ಪ್ರಥಮ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ. ಶಿವಮೊಗ್ಗದಲ್ಲಿಯೂ 12 ಕೋಟಿ ವೆಚ್ಚದಲ್ಲಿ ಕಟ್ಟಡಕ್ಕೆ ಸದ್ಯದಲ್ಲೇ ಶಂಕುಸ್ಥಾಪನೆ ಆಗಲಿದೆ ಎಂದರು.
ಪ್ರತೀ ವರ್ಷ ಏಪ್ರಿಲ್ 21ನೇ ತಾರೀಕು ನೌಕರರ ದಿನಾಚರಣೆಗೆ ಕರೆ ನೀಡಿದ್ದಾರೆ. ಸರ್ಕಾರಿ ನೌಕರರು ಹಾಗೂ 25 ಲಕ್ಷ ಕುಟುಂಬಸ್ಥರಿಗೆ ನಗದು ರಹಿತ ಆರೋಗ್ಯ ಸೇವೆ ಕೊಡುವ ಯೋಜನೆಗೂ ಸದ್ಯದಲ್ಲೇ ಜಾರಿಯಾಗುತ್ತಿರುವುದು ಸಂತಸದ ವಿಷಯ ಎಂದರು. ಅದಲ್ಲದೇ ಅವರು ಎರಡು ಬೇಡಿಕೆಗಳನ್ನು ಸಲ್ಲಿಸಿದರು.
1. ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯ ತೆಗೆದು ಹಾಕಿ, ಬೇರೆ ರಾಜ್ಯದಲ್ಲಿರುವಂತೆ ವೇತನ ಶ್ರೇಣಿಯನ್ನು ರಾಜ್ಯಕ್ಕೂ ಕೊಡಬೇಕು.
2. ನೂತನ ಪಿಂಚಣಿ ಯೋಜನೆಯನ್ನು ರದ್ದು ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟರು.