ಬೆಂಗಳೂರು:ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಅನುಪಸ್ಥಿತಿಯಲ್ಲೇ ಅವರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತರಾತುರಿಯಲ್ಲೇ ಚಾಲನೆ ನೀಡಿದ್ದಾರೆ. ಲಭ್ಯವಿರುವ ನೀರನ್ನು ಪೋಲು ಮಾಡದೆ ಮಳೆನೀರು ಕೊಯ್ಲು, ನೀರಿನ ಮರು ಬಳಕೆಯಂತಹ ದೀರ್ಘಾವಧಿ ಯೋಜನೆಗೆ ನಾವೆಲ್ಲಾ ಮುಂದಾಗಬೇಕಿದೆ ಎಂದು ಸಿಎಂ ಕರೆ ನೀಡಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆಂಗೇರಿಯ ದೊಡ್ಡಬೇಲೆಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಲೋಕಾರ್ಪಣೆ ಬಳಿಕ ಅವರು ಮಾತನಾಡಿದರು.
ಕಾರ್ಯಕ್ರಮದ ವೇದಿಕೆಗೆ ಬಂದ ತಕ್ಷಣವೇ ಘಟಕಗಳ ಲೋಕಾರ್ಪಣೆ ಮಾಡಿ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಿಎಂ, ನಾಡಗೀತೆ, ಸ್ವಾಗತ ಭಾಷಣಕ್ಕೂ ಮುನ್ನವೇ ಭಾಷಣಕ್ಕೆ ಮುಂದಾದರು. ಈ ವೇಳೆ ಸ್ವಾಗತ ಕೋರುತ್ತೇವೆ ಎಂದರೂ ಬೇಡವೆಂದು ಬಿಎಸ್‌ವೈ ಭಾಷಣಕ್ಕೆ ಮುಂದಾದರು. ಬಳಿಕ ನಾಡಗೀತೆ ಹಾಡಬೇಕು ಎನ್ನುವುದನ್ನು ಗಮನಕ್ಕೆ ತಂದ ನಂತರ ತಮಗೆ ನಿಗದಿಪಡಿಸಿದ್ದ ಆಸನದತ್ತ ತೆರಳಿ ನಾಡಗೀತೆ ಹಾಡಿದರು.
ತರಾತುರಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಉದ್ಘಾಟನೆ ನಂತರ ಮಾತನಾಡಿದ ಸಿಎಂ, ನಾನು ಬೇರೆ ಕಾರ್ಯಕ್ರಮಕ್ಕೆ ತುರ್ತಾಗಿ ಹೋಗಬೇಕಿದೆ. ಹಾಗಾಗಿ ಹೆಚ್ಚು ಮಾತನಾಡಲ್ಲ, ಬೆಂಗಳೂರು ನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಮೊನ್ನೆಯಷ್ಟೇ ಶಾಸಕರು, ಸಂಸದರ ಜೊತೆ ಸಭೆ ಮಾಡಿದ್ದೇನೆ. 2020 ರ ವೇಳೆಗೆ ಹೊರ ವರ್ತುಲ ರಸ್ತೆ ಆಗಲಿದೆ, ಖಾಸಗಿ ವಾಹನ ಓಡಾಟ ಕಡಿಮೆ ಮಾಡಲು ಸರ್ಕಾರಿ ಬಸ್ ಸೇವೆ ಹೆಚ್ಚು ಮಾಡಲಿದ್ದೇವೆ, ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿದ 110 ಗ್ರಾಮಗಳ ಕುಡಿಯುವ ನೀರಿನ ಪೂರೈಕೆಗೆ 1500ಕೋಟಿ ವೆಚ್ಚದಲ್ಲಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ತಿಳಿಸಿದರು.
ನೀರಿನ ಸಂಪನ್ಮೂಲದ ದುರ್ಬಳಕೆ, ಪರಿಸರ ಮಾಲಿನ್ಯ, ಜಾಗತಿಕ ತಾಪಮಾನ, ಕೈಗಾರಿಕೀಕರಣದಿಂದ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ನೀರಿನ ಕೊರತೆಯಾಗುತ್ತಿರುವ ಕಾರಣ ನೀರಿನ ಮರುಪೂರಣ, ಅಂತರ್ಜಲ ವೃದ್ಧಿಸುವ ಕೆಲಸ ಮಾಡಬೇಕಿದೆ. ತ್ಯಾಜ್ಯ ನೀರು ಶುದ್ಧೀಕರಿಸಿ ಸದ್ಬಳಕೆ ಮಾಡಬೇಕಿದೆ. ಅಲ್ಲದೆ, ಶುದ್ಧೀಕರಿಸಿದ ನೀರುನ್ನು ಕೃಷಿ, ಕೈಗಾರಿಕೆಗೆ ಬಳಸಬೇಕಿದೆ. ನೆಲ-ಜಲ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಯಡಿಯೂರಪ್ಪ ಘೋಷಿಸಿದರು.
ದೊಡ್ಡಬೇಲೆ ಭಾಗದಲ್ಲಿ ಗಿಡ ಮರ ಬೆಳೆಸಲು ಕ್ರಮ ಕೈಗೊಳ್ಳಿ. ಈ ಬಗ್ಗೆ ನಿಮಗೆ ನಾನು ಸೂಚನೆ ನೀಡುತ್ತಿದ್ದೇನೆ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಗೆ ಹೇಳುತ್ತಾ ಸಿಎಂ ವೇದಿಕೆಯಿಂದ ನಿರ್ಗಮಿಸಿದರು.