ಕರ್ನಾಟಕ

karnataka

ಆನೆ ಮಾವುತರ ವೇತನವನ್ನು ಅರಣ್ಯ ರಕ್ಷಕರ ವೇತನಕ್ಕೆ ಸರಿಸಮನಾಗಿ ನಿಗದಿಪಡಿಸಲು ತೀರ್ಮಾನ

By

Published : Jun 2, 2020, 11:35 PM IST

Updated : Jun 2, 2020, 11:49 PM IST

ಸಿಎಂ ಬಿಎಸ್​ವೈ ಅಧ್ಯಕ್ಷತೆಯಲ್ಲಿ ನಡೆದ ಅರಣ್ಯ, ಪರಿಸರ, ಜೀವಶಾಸ್ತ್ರ ಇಲಾಖೆಯ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಸಾಧಕ, ಬಾಧಕಗಳನ್ನು ಪರಿಶೀಲಿಸಲಾಯಿತು.

CM BSY fulfilled the demand of elephants mahout
ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಿಎಂ

ಬೆಂಗಳೂರು:ಆನೆ ಮಾವುತರ ವೇತನವನ್ನು ಅರಣ್ಯ ರಕ್ಷಕರ ವೇತನಕ್ಕೆ ಸರಿಸಮನಾಗಿ ನಿಗದಿಪಡಿಸುವಂತೆ ಹಲವು ವರ್ಷಗಳಿಂದ ಇದ್ದ ಬೇಡಿಕೆಯನ್ನು ಮುಖ್ಯಮಂತ್ರಿ ನವರು ಈಡೇರಿಸಿದ್ದಾರೆ.

ಇನ್ನು ಮುಂದೆ ಮಾವುತರಿಗೆ ಕೌಶಲ್ಯ ಕೆಲಸಗಾರರೆಂದು ಪರಿಗಣಿಸಿ ಅವರಿಗೆ ಅರಣ್ಯ ರಕ್ಷಕರ ವೇತನ ನೀಡಲಾಗುವುದು. ಇಂದು ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಅರಣ್ಯ, ಪರಿಸರ, ಜೀವಶಾಸ್ತ್ರ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು.

ವನ್ಯಜೀವಿಗಳ ದಾಳಿಯಿಂದ ಮರಣ ಹೊಂದುವವರಿಗೆ ನೀಡುವ ಪರಿಹಾರ ಧನದ ಮೊತ್ತವನ್ನು 7.50 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಲಾಯಿತು. ಇದರಿಂದ ವನ್ಯಜೀವಿಗಳ ದಾಳಿಗೊಳಗಾಗಿ ಮೃತಪಟ್ಟ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಿದಂತಾಗುವುದು. ಅರಣ್ಯ ಇಲಾಖೆಯ ಗಾರ್ಡ್‍ಗಳನ್ನು ಖಾಯಂಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಅನುದಾನ ಬಿಡುಗಡೆಗೆ ಮನವಿ:

ವನ್ಯಜೀವಿ ಸಂರಕ್ಷಣೆಯಲ್ಲಿ ಮರಣ ಹೊಂದುವವರಿಗೆ ಪರಿಹಾರ ಧನ ನೀಡುವುದು ಬಾಕಿಯಿದ್ದು, ಆರ್ಥಿಕ ಇಲಾಖೆಯಿಂದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಿಎಂ

ನೀಲಗಿರಿ ಬೆಳೆಸಲು ಸರ್ಕಾರ ನಿಷೇಧಿಸಿರುವುದರಿಂದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತವು ಆರ್ಥಿಕ ನಷ್ಟದಲ್ಲಿರುವುದರಿಂದ ಗೇರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತಗಳನ್ನು ವಿಲೀನಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಇದರ ಸಾಧಕ, ಬಾಧಕಗಳನ್ನು ಪರಿಶೀಲಿಸಿ ನಿರ್ಧಾರಕ್ಕೆ ಬರಲು ತೀರ್ಮಾನಿಸಲಾಯಿತು.

ಪುನಶ್ಚೇತನ ಕಾರ್ಯ ಪ್ರಗತಿ:

ಹಸಿರು ನ್ಯಾಯಾಧಿಕರಣದ ನಿರ್ದೇಶನಗಳ ಅನುಸಾರ ರಾಜ್ಯದ 17 ಅತ್ಯಂತ ಕಲುಷಿತ ನದಿ ಭಾಗಗಳ ಪುನಶ್ಚೇತನ ಕಾರ್ಯ ಪ್ರಗತಿಯಲ್ಲಿದೆ. ನಗರಗಳಲ್ಲಿ ವಾಯು ಗುಣಮಟ್ಟ ಪುನಶ್ಚೇತನಕ್ಕೆ ಕ್ರಮ ಕೈಗೊಂಡಿದ್ದು, ತೀವ್ರ ಕಲುಷಿತವೆಂದು ಗುರುತಿಸಲ್ಪಟ್ಟಿರುವ ಜಿಗಣಿ - ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಬೆಂಗಳೂರಿನ ಘನ ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಕ್ರಮಗಳ ಬಗ್ಗೆ ಎನ್.ಜಿ.ಟಿ ನಿರ್ದೇಶಿಸಿದ್ದು, ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅರಣ್ಯ ಸಚಿವ ಆನಂದ ಸಿಂಗ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಪ್ರಧಾನ ಕಾರ್ಯದರ್ಶಿಗಳಾದ ಸ್ಮಿತಾ ಬಿಜ್ಜೂರು ಹಾಗೂ ವಿಜಯ ಕುಮಾರ್ ಗೋಗಿ ಉಪಸ್ಥಿತರಿದ್ದರು.

Last Updated : Jun 2, 2020, 11:49 PM IST

ABOUT THE AUTHOR

...view details