ಬೆಂಗಳೂರು : ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೋವಿಡ್ ಸೋಂಕು ಎರಡನೇ ಬಾರಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಏಪ್ರಿಲ್ 16 ರಂದು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಸಿಎಂ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಆರೈಕೆ ಮಾಡಿದ ದಾದಿಯರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ ಸಿಎಂ, ಆಸ್ಪತ್ರೆಯಿಂದ ನೇರವಾಗಿ ಅಧಿಕೃತ ನಿವಾಸ ಕಾವೇರಿಗೆ ತೆರಳಿದರು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಬಿಎಸ್ವೈ ಕಳೆದ ಆರು ದಿನಗಳ ಕಾಲ ಸಿಎಂ ಬಿಎಸ್ವೈಗೆ ತಜ್ಞ ವೈದ್ಯರ ತಂಡ ಪ್ರತಿದಿನ ನಿಗಾವಹಿಸಿ ಚಿಕಿತ್ಸೆ ನೀಡಿತ್ತು. ನಿನ್ನೆ ಕೊರೊನಾ ತಪಾಸಣೆ ನಡೆಸಿದ್ದು, ಇಂದು ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.
ಕಳೆದ ಎಂಟು ತಿಂಗಳ ಹಿಂದೆ ಮೊದಲ ಬಾರಿ ಕೋವಿಡ್ ಸೋಂಕಿಗೆ ಒಳಗಾಗಿದ್ದ ಸಿಎಂ, ಆಗಲೂ ಮಣಿಪಾಲ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದರು. ಆಗ ಏಳು ದಿನಗಳಲ್ಲಿ ಗುಣಮುಖರಾಗಿದ್ದು, ಈ ಬಾರಿ ಆರು ದಿನಗಳಲ್ಲೇ ಗುಣಮುಖರಾಗಿ ಮರಳಿದ್ದಾರೆ. ಕೊರೊನಾ ಲಸಿಕೆಯ ಮೊದಲ ಡೋಸೇಜ್ ಪಡೆದಿದ್ದ ಕಾರಣಕ್ಕೆ ಸಿಎಂ ಆರೋಗ್ಯದಲ್ಲಿ ಅಷ್ಟು ಸಮಸ್ಯೆ ಕಾಣಿಸಿಕೊಳ್ಳಲಿಲ್ಲ. ಹಾಗಾಗಿ ಕೊರೊನಾದಿಂದ ಬೇಗ ಚೇತರಿಸಿಕೊಂಡರು ಎಂದು ವೈದ್ಯರು ತಿಳಿಸಿದ್ದಾರೆ.