ಬೆಂಗಳೂರು:ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಸಂದಿಗ್ಧತೆಯಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಬಿ.ಎಸ್. ಯಡಿಯೂರಪ್ಪ ಇಂದು ನಿರಾಳರಾಗಿದ್ದಾರೆ. ಮೌನ ಆವರಸಿದ್ಧ ಕಾವೇರಿಯಲ್ಲಿ ಮತ್ತೆ ಚಟುವಟಿಕೆಯ ಪುನರಾರಂಭಗೊಂಡಿದ್ದು, ಆಪ್ತರ ಜತೆ ಬಿಎಸ್ವೈ ಮನಬಿಚ್ಚಿ ಮಾತನಾಡುತ್ತಿದ್ದಾರೆ.
ಸಚಿವರು, ಪಕ್ಷದ ನಾಯಕರೊಂದಿಗೆ ಬಿಎಸ್ವೈ ಸಭೆ ಬಿಜೆಪಿ ಸರ್ಕಾರ ರಚನೆಯಾಗಿ ಇಂದಿಗೆ ಎರಡು ವರ್ಷ ಪೂರೈಸಿದ ಸಂಭ್ರಮದ ದಿನವೇ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ್ದಾರೆ. ಬಳಿಕ ರಾಜಭವನಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ, ಸಂಪುಟ ಸಹೋದ್ಯೋಗಿಗಳ ಸಮ್ಮುಖದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ನಂತರ ರಾಜಭವನದಿಂದ ನೇರವಾಗಿ ಸರ್ಕಾರಿ ನಿವಾಸ ಕಾವೇರಿಗೆ ಯಡಿಯೂರಪ್ಪ ತೆರಳಿದರು. ಸಂಪುಟ ಸಹೋದ್ಯೋಗಿಗಳು ಕೂಡ ಯಡಿಯೂರಪ್ಪ ಅವರನ್ನು ಹಿಂಬಾಲಿಸಿದರು. ಕಳೆದ ಕೆಲ ದಿನಗಳಿಂದ ಮಾನಸಿಕ ಒತ್ತಡಕ್ಕೆ ಸಿಲುಕಿ ಮೌನವಾಗಿ ಕುಳಿತಿದ್ದ ಯಡಿಯೂರಪ್ಪ ಇಂದು ಆಪ್ತರು ಹಾಗು ಸಚಿವರ ಜತೆ ಕೆಲ ಕಾಲ ಮಾತುಕತೆ ನಡೆಸಿದರು.
ಕಳೆದ ಕೆಲ ದಿನಗಳಿಂದ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮೌನವಾಗಿದ್ದ ಯಡಿಯೂರಪ್ಪ ಅವರನ್ನು ನೋಡಿ ವಾಪಸಾಗುತ್ತಿದ್ದ ಸಚಿವರುಗಳು ಇಂದು ಯಡಿಯೂರಪ್ಪ ಜತೆ ಕೆಲ ಸಮಯ ಮುಕ್ತ ಚರ್ಚೆ ನಡೆಸಿದರು. ಇದೀಗ ಕಾವೇರಿ ಮತ್ತೆ ರಾಜಕೀಯ ಚಟುವಟಿಕೆ ಕೇಂದ್ರವಾಗುತ್ತಿದೆ. ಮತ್ತೊಂದು ಶಕ್ತಿ ಕೇಂದ್ರವಾಗುವ ಸುಳಿವು ಇಂದಿನ ಸಭೆ ನೀಡುತ್ತಿದೆಯಾ? ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:CM ಸ್ಥಾನಕ್ಕೆ ರಾಜೀನಾಮೆ ನನ್ನ ಸ್ವಂತ ನಿರ್ಧಾರ: ಯಡಿಯೂರಪ್ಪ ಸ್ಪಷ್ಟನೆ