ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಎಲ್ಲರೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಕೊರೊನಾ ನಿಯಂತ್ರಣಕ್ಕೆ ಒಟ್ಟಾಗಿ ಹೋರಾಡೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
ಪ್ರಧಾನಮಂತ್ರಿಗಳ ಭಾಷಣದ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಅವರು, ಇಂದು ದೇಶದ ಪ್ರಧಾನಮಂತ್ರಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಭಾರತ ಇತರೆ ದೇಶಗಳಿಗೆ ಹೋಲಿಸಿದಲ್ಲಿ ಕೋವಿಡ್-19 ನಿಯಂತ್ರಣದಲ್ಲಿ ಉತ್ತಮ ಸ್ಥಿತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಲಾಕ್ಡೌನ್ ಅವಧಿಯಲ್ಲಿ ರಾಷ್ಟ್ರದ ಜನತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರುವುದು ಪ್ರಮುಖ ಕಾರಣವೆಂದು ತಿಳಿಸಿ ಅನ್ಲಾಕ್-1ರ ಅವಧಿಯಲ್ಲಿ ನಿಯಮಗಳ ಬಗ್ಗೆ ಹೆಚ್ಚಿನ ಗಮನ ನೀಡದಿರುವುದು ಆತಂಕದ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜನರು ಎಚ್ಚೆತ್ತುಕೊಂಡು ನಿಯಮಗಳನ್ನು ಪಾಲಿಸಿ ಸಂವೇದನಾಶೀಲತೆಯಿಂದ ತೀರ್ಮಾನ ತೆಗೆದುಕೊಳ್ಳುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿ ಜನ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಜಾರಿಗೆ ತಂದ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ವಯ ದೇಶದ 80 ಕೋಟಿ ಜನಸಂಖ್ಯೆಗೆ ಏಪ್ರಿಲ್‌ನಿಂದ ಜೂನ್ವರೆಗೆ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 5 ಕೆಜಿಯಂತೆ ಅಕ್ಕಿ /ಗೋಧಿ ಹಾಗೂ ಪ್ರತಿ ಕುಟುಂಬಕ್ಕೆ 1 ಕೆಜಿ ಬೇಳೆಯನ್ನು ಉಚಿತವಾಗಿ ನೀಡಲಾಗಿತ್ತು.