ಬೆಂಗಳೂರು:ಕೊರೊನಾ ದೊಡ್ಡ ಸವಾಲು ತಂದೊಡ್ಡಿದ್ದು, ಇದು ಜೀವ-ಜೀವನ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಇದರಿಂದ ಶೈಕ್ಷಣಿಕ ವ್ಯವಸ್ಥೆ ಸ್ತಬ್ಧವಾಗಿದೆ. ಈ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿರುವುದು ಒಂದು ಸಾಧನೆಯಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಕೊರೊನಾದಿಂದ ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿದ್ದವು ಈ ನಡುವೆಯೂ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದಕ್ಕೆ ಸಚಿವ ಸುರೇಶ್ ಕುಮಾರ್ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇತ್ತೀಚಿಗೆ ಪೋಷಕರು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳತ್ತ ಮುಖ ಮಾಡಿರುವುದು ಒಳ್ಳೆಯ ವಿಚಾರ ಎಂದರು.
ಶಿಕ್ಷಕ ದಿನಾಚರಣೆ ಅಂಗವಾಗಿ 39 ಮಂದಿಗೆ ಪ್ರಶಸ್ತಿ ಪ್ರಧಾನ ಮಾಡಿದ ಸಿಎಂ ಬಿಎಸ್ವೈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ
ರಾಜ್ಯ ಮಟ್ಟದ ಶಿಕ್ಷಕರಿಗೆ ಇದೇ ವೇಳೆ ಸಿಎಂ ಪ್ರಶಸ್ತಿ ಪ್ರದಾನ ಮಾಡಿದರು. ಒಟ್ಟು 20 ಮಂದಿಗೆ ಪ್ರಾಥಮಿಕ ಶಾಲಾ ವಿಭಾದಲ್ಲಿ ಉತ್ತಮ ಶಿಕ್ಷಣ ಪ್ರಶಸ್ತಿ ನೀಡಲಾಯಿತು. 11 ಮಂದಿಗೆ ಪ್ರೌಢಶಾಲಾ ವಿಭಾಗದಲ್ಲಿ ಉತ್ತಮ ಶಿಕ್ಷಕರ ಪ್ರಶಸ್ತಿ ನೀಡಿದರು. ಇಬ್ಬರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ನೀಡಲಾಯಿತು. 8 ಮಂದಿಗೆ ಉತ್ತಮ ಉಪನ್ಯಾಸಕರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಖಾಸಗಿ ಶಿಕ್ಷರ ಜೊತೆ ಸರ್ಕಾರ ಇದೆ
ಬಳಿಕ ಸಚಿವ ಸುರೇಶ್ ಕುಮಾರ್ ಮಾತನಾಡಿ, ನಮಗೆ ಬೇಸರದ ಸಂಗತಿ ಎಂದರೆ ಸುಮಾರು 3.5 ಲಕ್ಷ ಖಾಸಗಿ ಅನುದಾನ ರಹಿತ ಶಿಕ್ಷಕರು ಕಳೆದ 4 ತಿಂಗಳಿಂದ ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವು ನೀಡಲು ಬೇರೆ ಬೇರೆ ಹೆಜ್ಜೆ ಇಡುತ್ತಿದ್ದೇವೆ ಎಂದರು.
ಎಲ್ಲಾ ಖಾಸಗಿ ಶಿಕ್ಷಕರ ನೆರವಿಗೆ ಸರ್ಕಾರ ಮುಂದೆ ಬರಲಿದೆ. ಕೊರೊನಾ ಸಮಯದಲ್ಲಿ ನಮ್ಮ ಸರ್ಕಾರದ ನೇತೃತ್ವದಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಇಡೀ ದೇಶವೇ ಮೆಚ್ಚಿಕೊಂಡಿದೆ. ನಾವು ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಿದ ಮಾದರಿಯಲ್ಲೇ ಸಿಇಟಿ, ನೀಟ್ ಪರೀಕ್ಷೆ ನಡೆಸಲು ತೀರ್ಮಾನಿಸಿವೆ. ಇದಕ್ಕೆ ಸಹಕರಿಸಿದ ಎಲ್ಲಾ ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಮತ್ತು ಶಿಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಬ್ಲಾಕ್ ಚೈನ್ ಆನ್ ಲೈನ್ ಟೆಕ್ನಾಲಜಿ ಲೋಕಾರ್ಪಣೆ
ಇದೇ ವೇಳೆ ಬ್ಲಾಕ್ ಚೈನ್ ಆನ್‌ಲೈನ್ ತಂತ್ರಜ್ಞಾನಕ್ಕೆ ಸಿಎಂ ಚಾಲನೆ ನೀಡಿದರು. ಎನ್ಐಸಿ ಸಹಯೋಗದಲ್ಲಿ ಇದನ್ನು ಜಾರಿಗೆ ತರಲಾಗಿದ್ದು, ಇದು ಅತ್ಯಂತ ಸುರಕ್ಷಿತವಾದ ತಂತ್ರಜ್ಞಾನ ಆಗಿದೆ. ಇದರಲ್ಲಿ ವಿದ್ಯಾರ್ಥಿಗಳ ಮಾರ್ಕ್ಸ್ಕಾರ್ಡ್ ಅಪ್ಲೋಡ್ ಮಾಡಲಾಗುತ್ತದೆ. ಉದ್ಯೋಗ ಪಡೆಯುವ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲಿದೆ.