ಕರ್ನಾಟಕ

karnataka

ETV Bharat / state

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಮ್​.ಎ. ಹೆಗಡೆ ನಿಧನ.. ಸಿಎಂ, ಸಚಿವರಿಂದ ಸಂತಾಪ - ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ನಿಧನ

ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಎಮ್​.ಎ.ಹೆಗಡೆ ದಂಟ್ಕಲ್ ನಿಧನಕ್ಕೆ ಸಿಎಂ ಯಡಿಯೂರಪ್ಪ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

CM BSY and Minister's Condolence over Demise of A.M Hegde
ಎಂ.ಎ. ಹೆಗಡೆ ನಿಧನಕ್ಕೆ ಸಿಎಂ ಬಿಎಎಸ್ ಸಂತಾಪ

By

Published : Apr 18, 2021, 12:34 PM IST

ಬೆಂಗಳೂರು : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಮ್.ಎ ಹೆಗಡೆ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವರು ಸಂತಾಪ ಸೂಚಿಸಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತ ಅರ್ಥಧಾರಿ ಹಾಗೂ ಪ್ರಸಂಗ ಕರ್ತೃಗಳೂ ಆಗಿದ್ದ ಪ್ರೊ.ಹೆಗಡೆ ಅವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಯಕ್ಷಗಾನವನ್ನು ಇನ್ನಷ್ಟು ಜನಪ್ರಿಯಗೊಳಿಸಲು ಹಾಗೂ ಕಲಾವಿದರ ಹಿತರಕ್ಷಣೆಗೆ ಶ್ರಮಿಸಿದ್ದರು. ಸಂಸ್ಕೃತ ವಿದ್ವಾಂಸರಾಗಿದ್ದ ಅವರು, ಸಂಸ್ಕೃತ ಮತ್ತು ಯಕ್ಷಗಾನದ ಕುರಿತು ರಚಿಸಿದ ಕೃತಿಗಳು ಅತ್ಯಂತ ಮೌಲಿಕವಾದುದು. ಭಗವಂತನು ಮೃತರ ಆತ್ಮಕ್ಕೆ ಸದ್ಗತಿ ನೀಡಲಿ ಹಾಗೂ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಡಿಸಿಎಂ ಸವದಿ ಸಂತಾಪ :ಹೆಗಡೆಯವರು ಉತ್ತಮ ವಾಗ್ಮಿಗಳು, ಕನ್ನಡ ಮತ್ತು ಸಂಸ್ಕೃತದ ಪಂಡಿತರು. ಸ್ವತಃ ಯಕ್ಷಗಾನ ಕಲಾವಿದರಾಗಿ ಕನ್ನಡ ನಾಡು-ನುಡಿಗೆ ಅಪಾರ ಕೊಡುಗೆ ನೀಡಿದ್ದರು. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಹಲವು ಹೊಸತನದ ಅರ್ಥಪೂರ್ಣ ಕಲಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದು, ಹಲವು ಅಭಿಜಾತ ಕಲಾವಿದರಿಗೆ ಪ್ರೋತ್ಸಾಹ ಮಾರ್ಗದರ್ಶನ ನೀಡಿದ್ದರು. ಹೆಗಡೆ ಅವರ ಅಗಲಿಕ ನಿಧನ ನಿಜಕ್ಕೂ ಕನ್ನಡದ ಸೃಜನಶೀಲ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತಾ, ಅವರ ಕುಟುಂಬದವರಿಗೆ ಸಾಂತ್ವನ ತಿಳಿಸಬಯಸುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಅಶ್ವತ್ಥನಾರಾಯಣ ಕಂಬನಿ :ಯಕ್ಷಗಾನ ಕ್ಷೇತ್ರದಷ್ಟೇ ಕಲೆ ಸಂಸ್ಕೃತಿಯ ಬಗ್ಗೆ ಆಳವಾದ ಜ್ಞಾನ ಹೊಂದಿದ್ದ ಹೆಗಡೆ ಅವರು ಕೋವಿಡ್‌ ಮಹಾಮಾರಿಗೆ ತುತ್ತಾಗಿರುವುದು ಅತ್ಯಂತ ದುಃಖದ ಸಂಗತಿ. ಅವರ ಅಗಲಿಕೆ ಕಲಾ ಕ್ಷೇತ್ರಕ್ಕೆ ಆಗಿರುವ ಬಹದೊಡ್ಡ ನಷ್ಟ. ತಮ್ಮ ಜೀವಿತಾವಧಿಯ ಕೊನೆ ಕ್ಷಣದವೆರಗೂ ಕಲಾ ಸೇವೆಯನ್ನೇ ಮಾಡಿದ ಅವರು, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಕಾಡೆಮಿ ಅಧ್ಯಕ್ಷರಾಗಿ ಅವರು ಚಿರಸ್ಮರಣೀಯ ಕೆಲಸಗಳನ್ನು ಮಾಡಿದ್ದಾರೆ. ಕಲಾವಿದ, ಬೋಧಕ, ಮಾರ್ಗದರ್ಶಕ. ಹೀಗೆ, ಅನೇಕ ರೀತಿಯಲ್ಲಿ ಸಮಾಜಕ್ಕೆ ಮುಕ್ತವಾಗಿ ತೆರೆದುಕೊಂಡಿದ್ದ ಅವರು, ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕಾಣಿಕೆ ಆವಿಸ್ಮರಣೀಯ. ಸ್ವತಃ ಅನೇಕ ಪಾತ್ರಗಳನ್ನು ಮಾಡಿರುವ ಅವರು, 15ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ಸೀತಾ ವಿಯೋಗ, ತ್ರಿಶಂಕು ಚರಿತೆ, ರಾಜಾ ಕಂದಾಮ ಸೇರಿದಂತೆ ಅನೇಕ ಪ್ರಸಂಗಗಳು ಹೆಗಡೆಯವರನ್ನು ಚಿರಸ್ಥಾಯಿಗೊಳಿಸಿವೆ ಎಂದು ಡಿಸಿಎಂ ಅಶ್ವತ್​ ನಾರಾಯಣ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಚಿವ ಅರವಿಂದ್ ಲಿಂಬಾವಳಿ ಸಂತಾಪ :ಈ ನಾಡು ಕಂಡ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಎಮ್​.ಎ ಹೆಗಡೆ ಅವರು ಕೊರೊನಾ ಸೋಂಕಿನಿಂದ ನಿಧನರಾಗಿದ್ದು ದುರಾದೃಷ್ಟಕರ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದ ಅವರು ರೂಪಿಸಿದ್ದ ಮಾತಿನ ಮಂಟಪ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು. ಅವರ ಅಕಾಲಿಕ ನಿಧನದಿಂದ ನಿಜಕ್ಕೂ ಸಾಂಸ್ಕೃತಿಕ ಲೋಕ ಒಂದು ದಿಗ್ಗಜ ವ್ಯಕ್ತಿತ್ವವನ್ನು ಕಳೆದುಕೊಂಡಂತಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ ಕಂಬನಿ ಮಿಡಿದಿದ್ದಾರೆ.

ಓದಿ : ಕೋವಿಡ್​ಗೆ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಮ್.ಎ.ಹೆಗಡೆ ದಂಟ್ಕಲ್ ಬಲಿ

ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು ಮತ್ತು ಪಿಸಿ ಜಬಿನ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಹೆಗಡೆ ಕೆಲಸ ಮಾಡಿದ್ದರು. ಸಂಸ್ಕೃತದಲ್ಲಿಯೂ ಅಪಾರ ಪಾಂಡಿತ್ಯ ಹೊಂದಿದ್ದರು. ಸಂಸ್ಕೃತ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದ ಹೆಗಡೆ ಅವರು, ಯಕ್ಷಗಾನದ ಬಗ್ಗೆ ವಿಶೇಷ ಒಲವು ಹೊಂದಿದ್ದರು ಸ್ವತಃ ಪಾತ್ರಧಾರಿಯೂ ಆಗಿದ್ದ ಅವರು, 15ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ಸೀತ ವಿಯೋಗ, ತ್ರಿಶಂಕು ಚರಿತೆ, ರಾಜಾ ಕಂದಾಮ ಮುಂತಾದವು ಅವರ ಜನಪ್ರಿಯ ಪ್ರಸಂಗಗಳು. ಅಲಂಕಾರ ತತ್ವ, ಭಾರತೀಯ ತತ್ವಶಾಸ್ತ್ರ ಪರಿಚಯ, ಬ್ರಹ್ಮಸೂತ್ರ, ಚತು ಸೂತ್ರಿ ಮತ್ತು ಸಿದ್ಧಾಂತ ಬಿಂದು ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ. ಅತ್ಯಂತ ಪ್ರಚಾರ ಚಿಂತನೆಯ ವಿದ್ವಾಂಸರಾಗಿದ್ದ ಎಮ್​.ಎ ಹೆಗಡೆ ತಮ್ಮ ಚಿಂತನೆಯನ್ನು ನಿಷ್ಠುರವಾಗಿ ಪ್ರತಿಪಾದಿಸುತ್ತಿದ್ದರು. ಸರಳ ಹಾಗೂ ನೇರ ನಡವಳಿಕೆಗೆ ಹೆಸರಾಗಿದ್ದರು. ಅವರ ನಿಧನ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details