ಬೆಂಗಳೂರು: ಕನ್ನಡದ ಹಬ್ಬ ಕನ್ನಡ ರಾಜ್ಯೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.
ನಾಡಿನ ಭವ್ಯ ಪರಂಪರೆ, ಇತಿಹಾಸವನ್ನು ಉಳಿಸಿ ಬೆಳೆಸುವ ಜೊತೆಗೆ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಕನ್ನಡ ಸೋದರ - ಸೋದರಿಯರ ಬದುಕು ಕಟ್ಟಿಕೊಡಲು ತನು, ಮನ, ಧನ ದಿಂದ ನೆರವಾಗೋಣ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಕನ್ನಡಾಂಬೆ ಭುವನೇಶ್ವರಿಯ ಅನುಗ್ರಹದಿಂದ ಸ್ವಚ್ಛ, ಸ್ವಸ್ಥ ಹಾಗೂ ಸಮೃದ್ಧ ಕನ್ನಡ ನಾಡನ್ನು ನಿರ್ಮಿಸೋಣ ಎಂದು ಸಿಎಂ ಹಾರೈಸಿದ್ದಾರೆ.
ಹರಿದು ಹಂಚಿಹೋಗಿರುವ ಕನ್ನಡಿಗರು ಕನ್ನಡ ಎಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಹೆಮ್ಮೆಯ ದಿನ. ಕನ್ನಡದ ಕನಸು ಸಾಕಾರಗೊಳ್ಳಲು ಶ್ರಮಿಸಿದ ಲಕ್ಷಾಂತರ ಕನ್ನಡ ಹೋರಾಟಗಾರರು,ಸಾಹಿತಿಗಳು, ಕಲಾವಿದರ ಶ್ರಮ, ತ್ಯಾಗ,ಬಲಿದಾನಗಳನ್ನು ಸ್ಮರಿಸುವ ದಿನ ಕೂಡಾ ಹೌದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯೋತ್ಸವದ ಸಂದೇಶ ನೀಡಿದ್ದಾರೆ.
ಕನ್ನಡಿಗರನ್ನು ಬೆಸೆದ ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಅಸ್ಮಿತೆ. ನಮ್ಮ ಹೆಗ್ಗುರುತು. ಕನ್ನಡ ನಾಡಿನ ರಚನೆಗೆ ಶ್ರಮಿಸಿದ ಎಲ್ಲರನ್ನೂ ನೆನೆಯುತ್ತೇನೆ. ಕನ್ನಡ ಹೋರಾಟಗಾರರನ್ನು ಸ್ಮರಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿಶೇಷ ದಿನಕ್ಕೆ ಸಂದೇಶ ರವಾನಿಸಿದ್ದಾರೆ.