ಬೆಂಗಳೂರು :ಹಲವು ತಿಂಗಳುಗಳ ಬಳಿಕ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಸಿಎಂ ಬಿ ಎಸ್ ಯಡಿಯೂರಪ್ಪ ಇಂದು ನಗರದ ಹಲವು ಸ್ಮಾರ್ಟ್ ಸಿಟಿ ಯೋಜನೆಗಳು ಹಾಗೂ ವೈಟ್ ಟಾಪಿಂಗ್ ರಸ್ತೆಗಳ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ವೇಳೆ ಗಾಂಧಿನಗರ ಕ್ಷೇತ್ರದ ಸುಬೇದಾರ್ ಛತ್ರಂ ರಸ್ತೆ, ಕೆಂಪೇಗೌಡ ರಸ್ತೆ, ಧನ್ವಂತರಿ ರಸ್ತೆ, ಕೆಎಸ್ಆರ್ಟಿಸಿ ರಸ್ತೆ, ಗುಬ್ಬಿ ತೋಟದಪ್ಪ ರಸ್ತೆಗಳ ಟೆಂಡರ್ ಶ್ಯೂರ್ ಕಾಮಗಾರಿ ವೀಕ್ಷಿಸಿದರು. ನಂತರ ಟೌನ್‌ಹಾಲ್ ರಸ್ತೆ ಮುಖಾಂತರವಾಗಿ ನಾಯಂಡಹಳ್ಳಿ ಜಂಕ್ಷನ್ಗೆ ತೆರಳಿ ಅಲ್ಲಿ ಮೈಸೂರು ದಸರಾ ಅಂಬಾರಿ ಹೊತ್ತ ಆನೆಯ ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಾಗಿದ್ದು, ಉದ್ಘಾಟನೆ ಮಾಡಿದರು.
ಮಳೆ ನಡುವೆಯೂ ಯೋಜನೆಗಳ ಸ್ಥಳ ಪರಿಶೀಲನೆ ನಡೆಸಿದ ಸಿಎಂ ನಂತರ ಔಟರ್‌ರಿಂಗ್ ರಸ್ತೆ ಮೂಲಕ ಬಂದು ಶಿವಾಜಿ ನಗರದ ಕಮರ್ಷಿಯಲ್ ಸ್ಟ್ರೀಟ್ ಹೊಸ ರಸ್ತೆ ಕಾಮಗಾರಿ ವೀಕ್ಷಿಸಿದರು. ಪರಿಸರ ಸ್ನೇಹಿಯಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ 5.41 ಕೋಟಿ ರೂ. ವೆಚ್ಚದಲ್ಲಿ 0.46 ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು, ಇದರ ವೀಕ್ಷಣೆ ನಡೆಸಿದರು. ಬಳಿಕ ಅದೇ ರಸ್ತೆಯಲ್ಲಿರುವ ಉಡ್ಡೀಸ್ ಹೋಟೆಲ್ನಲ್ಲಿ ಶಾಸಕರು ಸಚಿವರ ಜತೆ ಕಾಫಿ- ತಿಂಡಿ ಸೇವನೆ ಮಾಡಿದರು.
ಒಂದೆಡೆ ಸಿಎಂ ಝೀರೋ ಟ್ರಾಫಿಕ್ನಲ್ಲಿ ನಗರ ಪ್ರದಕ್ಷಿಣೆ ನಡೆಸುತ್ತಿದ್ದರೆ, ನಗರದ ಮೆಜೆಸ್ಟಿಕ್, ಕೆಆರ್ ಸರ್ಕಲ್, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಜೆಸಿ ರಸ್ತೆ, ಶಿವಾಜಿ ನಗರದಲ್ಲಿ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಂನಲ್ಲಿ ನಿಂತು ಜನ ಬೇಸತ್ತು ಹೋದರು. ಮಳೆಯೂ ಇದ್ದಿದ್ದರಿಂದ ಅನೇಕ ದ್ವಿಚಕ್ರವಾಹನ ಚಾಲಕರು ಮಳೆಯ ನಡುವೆಯೂ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಬೇಕಾಯಿತು.
ಪಕ್ಷದ ಕಾರ್ಯಕರ್ತರಿಂದ ಬಾವುಟ ಹಿಡಿದು ಸ್ವಾಗತ :
ಕಮರ್ಷಿಯಲ್ ಸ್ಟ್ರೀಟ್ ವೀಕ್ಷಣೆ ಬಳಿಕ ಸರ್ ಸಿ ವಿ ರಾಮನ್ ಆಸ್ಪತ್ರೆಯ ರಸ್ತೆಯ ಮುಂಭಾಗದ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ವೀಕ್ಷಣೆಗೆ ತೆರಳಿದಾಗ ರಸ್ತೆಯ ಎರಡೂ ಭಾಗದಲ್ಲಿ ಪಕ್ಷದ ಕಾರ್ಯಕರ್ತರು ಬಾವುಟ ಹಿಡಿದು ಸ್ವಾಗತಿಸಿದರು. ಮಳೆಯ ನಡುವೆಯೇ ಸಿಎಂ ಕೊಡೆ ಹಿಡಿದು ಶಾಂತಿನಗರದ ಬಳಿ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿ ವೀಕ್ಷಿಸಿದರು.
ನಗರ ವೀಕ್ಷಣೆ ಬಳಿಕ ಕೃಷ್ಣಾಗೆ ತೆರಳಿದ ಸಿಎಂ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹಿರಿಯ ಅಧಿಕಾರಿಗಳ ಜತೆಗೆ ನಗರ ಪರಿಶೀಲನೆ ನಡೆಸಲಾಗಿದೆ. ಶಾಸಕರಾದ ಎನ್ ಎ ಹ್ಯಾರಿಸ್, ರಿಜ್ವಾನ್ ಅರ್ಷದ್ ಭಾಗಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಅಭಿನಂದನೆ ಸಲ್ಲಿಸಿದರು. ಬೆಂಗಳೂರು ನಗರ ಪ್ರವಾಸಿಗರ ತಾಣ ಆಗಬೇಕು. ಅದಕ್ಕೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗ್ತಿದೆ.
20 ವರ್ಷ ಆದರೂ ಸಣ್ಣ ಗುಂಡಿಯಾಗದ ರೀತಿ ರಸ್ತೆ ಕಾಮಗಾರಿಗಳನ್ನು ನಡೆಸಲಾಗಿದೆ. ಕ್ವಾಲಿಟಿ ರಸ್ತೆಗಳು, ರಾಜಕಾಲುವೆಗಳ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಪಾರ್ಕ್ ಅಭಿವೃದ್ಧಿಗೆ ವಿಶೇಷ ಗಮನ ಕೊಡಲಾಗಿದೆ. ಬೆಂಗಳೂರಿನ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಹಣಕಾಸಿನ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. 36 ರಸ್ತೆಗಳನ್ನು ಸ್ಮಾರ್ಟ್ ಸಿಟಿಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. 69 ರಸ್ತೆಗಳು ವೈಟ್ ಟಾಪಿಂಗ್ ರಸ್ತೆಯಡಿ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಪರಿಶೀಲನೆ ವೇಳೆ ಸಿಎಂಗೆ ಉಪಮುಖ್ಯಮಂತ್ರಿ ಡಾ. ಸಿ ಎನ್.ಅಶ್ವತ್ಥ್ ನಾರಾಯಣ, ಸಚಿವರಾದ ಆರ್.ಅಶೋಕ್, ಕೆ.ಗೋಪಾಲಯ್ಯ, ಭೈರತಿ ಬಸವರಾಜು, ವಿ.ಸೋಮಣ್ಣ, ಅರವಿಂದ ಲಿಂಬಾವಳಿ, ಶಾಸಕರಾದ ರಿಜ್ವಾನ್ ಅರ್ಷದ್, ರಘು, ಎನ್.ಎ.ಹ್ಯಾರಿಸ್ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಸಾಥ್ ನೀಡಿದರು.
ಇದನ್ನೂ ಓದಿ:ನೆರೆ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಡಳಿತದ ಜೊತೆ ಸಿಎಂ ವಿಡಿಯೋ ಸಂವಾದ