ಬೆಂಗಳೂರು:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇರೋದೇ ಆರೋಪ ಮಾಡುವುದಕ್ಕೆ. ಹಾಗಾಗಿ ಅವರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಹಿರೇನಾಗವೇಲಿ ಘಟನೆ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿಭವನದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು 2ನೇ ಘಟನೆಯಾಗಿದೆ. ಕಾನೂನು ಬಾಹಿರವಾಗಿ ಆಗುತ್ತಿರುವ ಘಟನೆ ಇದಾಗಿದ್ದು, ಇದಕ್ಕೆ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೇವೆ. ಗೃಹ ಸಚಿವರು ಬಂದ ನಂತರ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಘಟನೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರಿದ್ದಾರೆ ಎನ್ನುವ ಆರೋಪ ಸರಿಯಲ್ಲ. ಇಲ್ಲಿ ಪಕ್ಷ ಪಂಗಡದ ಪ್ರಶ್ನೆ ಬರಲ್ಲ. ಇದು ಕಾನೂನು ಬಾಹಿರ ಚಟುವಟಿಕೆ. ಇದರ ಮೇಲೆ ಬಿಗಿಯಾದ ಕ್ರಮ ಕೈಗೊಳ್ಳಬೇಕು. ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಸರ್ಕಾರ ಬಿಗಿಯಾದ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ. ಮೃತರ ಬಗ್ಗೆ ನಮಗೆ ಅನುಕಂಪವಿದೆ. ಘಟನೆಗಳು ಮರುಕಳಿಸಬಾರದು ಯಾರೇ ಇದ್ದರೂ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಇಂತಹ ಸನ್ನಿವೇಶದಲ್ಲಿ ನಾನು-ನೀವು ಏನು ಮಾಡಲು ಸಾಧ್ಯ? ನನ್ನ ಜಾಗದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ? ನಾವು ಹೇಳಿದ್ದೇವಾ? ಬೆಳಗಿನ ಜಾವ ಹೋಗಿ ಅದನ್ನೆಲ್ಲಾ ಮಾಡಿ ಅಂತಾ, ನಾವು ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ ಅಂತಾ ಯಾರು ಹೇಳಿದರು ಎಂದು ಸಿಎಂ ಗರಂ ಆದರು.
ಯಾರು ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದಾರೋ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಸಿದ್ದರಾಮಯ್ಯ ಅವರು ಸಲಹೆ ಕೊಡಲಿ. ಏನು ಕ್ರಮ ಕೈಗೊಳ್ಳಬೇಕೋ ಆ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಸಿಎಂ ಪ್ರತಿಕ್ರಿಯಿಸಿದರು.
ಬಜೆಟ್ ಕುರಿತು ವಿವಿಧ ಇಲಾಖೆಗೆಗಳ ಸಭೆ ಇಂದು ಮುಗಿದಿದೆ. ನಾಳೆ ನಾಡಿದ್ದು ಎರಡು ದಿನ ಯಾವ ಯೋಜನೆ ಬೇಕು, ಯಾವುದನ್ನು ಸೇರಿಸಬೇಕು ಎಂದು ಹಣಕಾಸು ಇತಿಮಿತಿಯನ್ನು ನೋಡಿಕೊಂಡು ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ಬಿಎಸ್ವೈ ತಿಳಿಸಿದರು.
ಓದಿ: ಚಿಕ್ಕಬಳ್ಳಾಪುರ ಕಲ್ಲು ಕ್ವಾರಿ ದುರಂತ: ಜಿಲೆಟಿನ್ ಸ್ಫೋಟದಿಂದ 6 ಜನ ದುರ್ಮರಣ