ಬೆಂಗಳೂರು: ಮಂಗಳವಾರದಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಸಂಪೂರ್ಣವಾಗಿ ಲಾಕ್‌ಡೌನ್ ಆಗಲಿದ್ದು, ಅಗತ್ಯ ಸೇವೆಗಳು ಮಾತ್ರ ಲಭ್ಯವಾಗಲಿವೆ ಎಂದು ಈಗಾಗಲೇ ಸರ್ಕಾರ ಮಹತ್ವದ ನಿರ್ಧಾರ ಹೊರಹಾಕಿದೆ.
ಕಳೆದ ಕೆಲ ದಿನಗಳ ಹಿಂದೆ ಮಾತನಾಡಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಲಾಕ್‌ಡೌನ್ ಪರಿಹಾರವಲ್ಲ. ಯಾವುದೇ ಕಾರಣಕ್ಕೂ ಮತ್ತೊಮ್ಮೆ ಲಾಕ್‌ಡೌನ್ ಹೇರಿಕೆ ಮಾಡಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ಸಿಎಂ ಯಡಿಯೂರಪ್ಪ ಬೆಂಗಳೂರು ಲಾಕ್‌ಡೌನ್ ದಿಢೀರ್ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬುದನ್ನ ನೋಡುವುದಾದರೆ, ಅದಕ್ಕೆ ಅನೇಕ ಕಾರಣಗಳು ಲಭ್ಯವಾಗುತ್ತವೆ.
ಪ್ರಮುಖ ಕಾರಣಗಳು ಈ ಕೆಳಗಿನಂತಿವೆ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಅದರಲ್ಲಿ ಬಹು ಪಾಲು ಕೊಡುಗೆ ಬೆಂಗಳೂರಿನದ್ದೇ. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ನಿತ್ಯ 1,200ಕ್ಕೂ ಅಧಿಕ ಕೊರೊನಾ ಪ್ರಕರಣ ಪತ್ತೆಯಾಗುತ್ತಿದ್ದು, ಬಹುತೇಕ ಎಲ್ಲಾ ಪ್ರಕರಣಗಳಿಗೆ ಸಂಪರ್ಕವೇ ಪತ್ತೆಯಾಗುತ್ತಿಲ್ಲ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಸಂಪರ್ಕವೇ ಪತ್ತೆಯಾಗದ ಕಾರಣ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ ಎಂದು ತಜ್ಞರು ಸಿಎಂ ಬಳಿ ಆತಂಕ ವ್ಯಕ್ತಪಡಿಸಿದ್ದರು. ಇದರಿಂದ ಕೊರೊನಾ ಸಮುದಾಯಕ್ಕೆ ತಲುಪುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ಬೆಂಗಳೂರಲ್ಲಿ ಕೊರೊನಾ ಹರಡುವಿಕೆಗೆ ಬ್ರೇಕ್ ಹಾಕಬೇಕಾದರೆ ಅಲ್ಪಾವಧಿಯ ಲಾಕ್‌ಡೌನ್ ಅನಿವಾರ್ಯ ಎಂಬ ವರದಿಯನ್ನು ತಜ್ಞರ ಸಮಿತಿ ನೀಡಿತ್ತು ಎಂದು ಮೂಲಗಳು ತಿಳಿಸಿವೆ. ಜೊತೆಗೆ ಹೆಚ್ಚಾದ ಕೊರೊನಾ ಪ್ರಕರಣಗಳಿಂದ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಕಲ್ಪಿಸುವುದು ಕಷ್ಟಕರವಾಗಲಿದೆ. ಜೊತೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಕಾರಣ ಬೆಂಗಳೂರಲ್ಲಿ ಕೊರೊನಾದಿಂದಾಗಿ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಸದ್ಯ ಕೊರೊನಾ ಹರಡುವಿಕೆಗೆ ಬ್ರೇಕ್ ಹಾಕಿ, ಆರೋಗ್ಯ ವ್ಯವಸ್ಥೆಯಲ್ಲಿ ಸೂಕ್ತ ತಯಾರಿ ಮಾಡಲು ಸಂಪೂರ್ಣ ಲಾಕ್‌ಡೌನ್ ಹೇರಿಕೆ ಮಾಡಲಾಗಿದೆ.
- ಬೆಂಗಳೂರಿನಲ್ಲಿ ಕೊರೊನಾ ಪ್ರಮಾಣ ಕಳೆದ ಮೂರು ನಾಲ್ಕು ದಿನಗಳಲ್ಲಿ ಕೊರೊನಾ ಹಾಟ್ ಸ್ಪಾಟ್ ಮುಂಬೈ ಮತ್ತು ದೆಹಲಿಯನ್ನು ಮೀರಿಸುತ್ತಿರುವುದು ಸಿಎಂಗೆ ಪರಿಸ್ಥಿತಿಯ ಗಂಭೀರತೆಯನ್ನು ಅರಿವಾಗಿಸಿತ್ತು. ಹೀಗಾಗಿ ಪರಿಸ್ಥಿತಿ ಸಂಪೂರ್ಣ ಕೈ ಮೀರುವ ಮುನ್ನವೇ ಕೊರೊನಾಗೆ ತಡೆ ಹಾಕುವುದು ಉತ್ತಮ ಎಂಬುದನ್ನು ಸಿಎಂ ಮನಗಂಡಿದ್ದಾರೆ.
ಇತ್ತ ಉತ್ತರಪ್ರದೇಶ, ಮಹಾರಾಷ್ಟ್ರ ಸರ್ಕಾರಗಳು ಕೊರೊನಾ ಅಬ್ಬರ ಹಿನ್ನೆಲೆ ತಮ್ಮ ರಾಜ್ಯದ ಪ್ರಮುಖ ನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಹೇರಿ ಆದೇಶ ಹೊರಡಿಸಿತ್ತು. ಲಕ್ನೋ, ಥಾಣೆಯಲ್ಲಿ ವಾರಗಳ ಕಾಲ ಸಂಪೂರ್ಣ ಲಾಕ್‌ಡೌನ್ ಹೇರಿ ಆದೇಶ ಹೊರಡಿಸಿದೆ. ಇದನ್ನು ಮನಗಂಡ ಸಿಎಂ ಯಡಿಯೂರಪ್ಪ ತಜ್ಞರ ಸಲಹೆಯಂತೆ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಲಾಕ್‌ಡೌನ್ ಹೇರುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಸಚಿವರಿಗೇ ಸಿಎಂ ಲಾಕ್‌ಡೌನ್ ನಿರ್ಧಾರದ ಅರಿವಿದ್ದಿಲ್ಲ:
ಬಹುತೇಕ ಸಚಿವರುಗಳಿಗೆ ಸಿಎಂ ಲಾಕ್‌ಡೌನ್ ನಿರ್ಧಾರದ ಬಗ್ಗೆ ಮಾಹಿತಿ ಇರಲಿಲ್ಲ. ಸಿಎಂ ದಿಢೀರ್ ಆಗಿ ಬೆಂಗಳೂರು ಲಾಕ್‌ಡೌನ್ ನಿರ್ಧಾರಕ್ಕೆ ಬಂದಿದ್ದಾರೆ.
ಸಚಿವರುಗಳಲ್ಲಿ ಲಾಕ್‌ಡೌನ್ ಬಗ್ಗೆ ಯಾವುದೇ ಪ್ರಸ್ತಾಪವನ್ನೂ ಸಿಎಂ ಮಾಡಿರಲಿಲ್ಲ. ಮೊನ್ನೆ ನಡೆದ ಸಂಪುಟ ಸಭೆಯಲ್ಲೂ ಲಾಕ್‌ಡೌನ್ ಹೇರಿಕೆ ಬಗ್ಗೆ ವಿಷಯ ಪ್ರಸ್ತಾಪಿಸಿರಲಿಲ್ಲ.
ತಜ್ಞರ ಸಮಿತಿ ಶಿಫಾರಸು, ಬೆಂಗಳೂರಲ್ಲಿ ಮಿತಿ ಮೀರುತ್ತಿರುವ ಕೊರೊನಾ ಪ್ರಮಾಣದ ಗಾಂಭೀರ್ಯತೆಯನ್ನು ಅರಿತ ಸಿಎಂ ಯಡಿಯೂರಪ್ಪ ಇಂದು ಸಂಜೆ ಅಚಾನಕ್ಕಾಗಿ ಒಂದು ವಾರದ ಲಾಕ್‌ಡೌನ್ ನಿರ್ಧಾರಕ್ಕೆ ಬಂದಿದ್ದಾರೆ.