ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜೀನಾಮೆ ನಂತರ ರಚನೆಯಾಗುವ ಹೊಸ ಬಿಜೆಪಿ ಸರ್ಕಾರದಲ್ಲಿ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ 'ಪವರ್ ಫುಲ್' ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಉಪ ಮುಖ್ಯಮಂತ್ರಿ ಪದವಿ ಅಥವಾ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿ ಇಂಧನ, ಜಲಸಂಪನ್ಮೂಲ, ಹಣಕಾಸು, ಲೋಕೋಪಯೋಗಿ ಇಲಾಖೆಯಂಥ ಪ್ರಮುಖ ಇಲಾಖೆಗಳ ಖಾತೆಗಳನ್ನು ನೀಡುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿ ಭೇಟಿ ವೇಳೆ ಬಿಜೆಪಿ ಹೈಕಮಾಂಡ್ ಜತೆ ತಮ್ಮ ಪುತ್ರ ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿ ಪ್ರಮುಖ ಹುದ್ದೆಗಳನ್ನು ನೀಡುವಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ. ಉಪ ಮುಖ್ಯಮಂತ್ರಿ ಸ್ಥಾನ, ಇಲ್ಲವೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಗಳನ್ನು ನೀಡಬೇಕೆನ್ನುವುದು ಮೊದಲ ಆದ್ಯತೆಯ ಬೇಡಿಕೆಯಾಗಿದೆಯಂತೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿ ಇಂಧನ, ಜಲಸಂಪನ್ಮೂಲ ಇಲಾಖೆಯಂಥ ಮಹತ್ವದ ಖಾತೆಗಳನ್ನು ನೀಡುವಂತೆ ಹೈಕಮಾಂಡ್ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ರಾಜಾಹುಲಿ ರಾಜೀನಾಮೆಗೆ ಹೆಚ್ಚು ಸಮಯ ನೀಡದ ಹೈಕಮಾಂಡ್: ತರಾತುರಿ ನಿರ್ಧಾರಕ್ಕೆ ಕಾರಣ?
ಸಿಎಂ ಯಡಿಯೂರಪ್ಪ ರಾಜೀನಾಮೆ ನಂತರ ಅವರ ಪುತ್ರ ಬಿ.ಎಸ್ ವಿಜಯೇಂದ್ರ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಉತ್ತಮ ಸ್ಥಾನ ಮಾನ ನೀಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಭರವಸೆ ನೀಡಿದೆ ಎಂದು ಹೇಳಲಾಗಿದೆ. ಆದರೆ ನಿರ್ದಿಷ್ಟವಾಗಿ ಯಾವ ಹುದ್ದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. 'ಈಟಿವಿ ಭಾರತ'ಕ್ಕೆ ಲಭ್ಯವಾಗಿರುವ ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಉಪಮುಖ್ಯಮಂತ್ರಿ ಸ್ಥಾನ ಇಲ್ಲವೇ ಕ್ಯಾಬಿನೆಟ್ ದರ್ಜೆಯ ಸಚಿವ ಪದವಿ ನೀಡಿ ಇಂಧನ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.