ಬೆಂಗಳೂರು:ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಎರಡು ವರ್ಷ ತುಂಬಲಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುವ ಸನ್ನಿವೇಶ ಮುಂದಿದ್ದರೂ ಸಿಎಂ ಕರ್ತವ್ಯನಿಷ್ಠೆ ಮೆರೆಯುವ ದಿನಚರಿ ಪಾಲನೆ ಮಾಡುತ್ತಿದ್ದಾರೆ.
ಎಂದಿನಂತೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅವರು ತೊಡಗಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೋ ಇಲ್ಲವೋ ಎನ್ನುವುದು ಇಂದು ಹೈಕಮಾಂಡ್ ರವಾನಿಸುವ ಸಂದೇಶದ ಮೇಲೆ ಅವಲಂಬಿಸಿದೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಿಎಂ ಯಡಿಯೂರಪ್ಪ ನಾಳಿನ ಕಾರ್ಯಕ್ರಮಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.
ನಾಳೆಗೆ ಬೆಳಗ್ಗೆ 9.50 ರಿಂದ 10.10 ರವರೆಗೆ ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ನಡೆಯುವ ಕಾರ್ಯಕ್ರಮದ ನಂತರ ನೇರವಾಗಿ ವಿಧಾನಸೌಧಕ್ಕೆ ತೆರಳಲಿದ್ದಾರೆ. 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿರುವ ಸರ್ಕಾರದ ಎರಡು ವರ್ಷದ ಸಾಧನಾ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದು, ಸರ್ಕಾರದ ಸಾಧನೆ ಕುರಿತು ಭಾಷಣ ಮಾಡಲಿದ್ದಾರೆ.
ವಿದಾಯ ಭಾಷಣ?
ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡುವ ಭಾಷಣ ಯಡಿಯೂರಪ್ಪ ಅವರ ಭವಿಷ್ಯದ ನಡೆಯನ್ನು ಸ್ಪಷ್ಟವಾಗಿ ಸೂಚಿಸಲಿದೆ. ರಾಜೀನಾಮೆ ನೀಡುವಂತೆ ಹೈಕಮಾಂಡ್ ಸಂದೇಶ ಕಳಿಸಿದ್ದರೆ ಯಡಿಯೂರಪ್ಪ ವಿದಾಯದ ಭಾಷಣ ಮಾಡಲಿದ್ದಾರೆ. ರಾಜಕೀಯ ಏಳು-ಬೀಳು, ಸರ್ಕಾರ ಎದುರಿಸಿದ ಸಂಕಷ್ಟ-ಸವಾಲುಗಳನ್ನು ಪ್ರಸ್ತಾಪಿಸಿ ಭಾವುಕ ಭಾಷಣ ಮಾಡಲಿದ್ದಾರೆ. ಮುಂದಿನ ನಡೆಯ ನಿರ್ಧಾರವನ್ನೂ ಬಹುತೇಕ ಪ್ರಕಟಿಸುವ ಸುಳಿವುಗಳನ್ನು ಭಾಷಣದಲ್ಲೇ ನೀಡಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮೂರು ದಿನ ಆಡಳಿತ ನಡೆಸಿದ್ದ ವೇಳೆ ಬಹುಮತ ಸಾಬೀತು ಬದಲು ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣ ನೆನಪಿಸುವ ರೀತಿಯಲ್ಲಿ ಭಾಷಣ ಮಾಡಿ ಸದನದಿಂದ ಹೊರನಡೆದು ರಾಜೀನಾಮೆ ನೀಡಿದ್ದರು. ಈಗ ಅದೇ ರೀತಿ ಸಾಧನಾ ಸಮಾರಂಭದಲ್ಲೇ ವಿದಾಯದ ಭಾಷಣ ಮಾಡಿ ಕಾಲ್ನಡಿಗೆಯಲ್ಲೇ ಬೆಂಬಲಿಗರ ಜೊತೆ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.ಆದರೆ ಇದೆಲ್ಲವೂ ಹೈಕಮಾಂಡ್ ನೀಡುವ ಸೂಚನೆಯನ್ನು ಅವಲಂಬಿಸಿದೆ.