ಬೆಂಗಳೂರು :ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಅಧಿಕೃತ ನಿವಾಸ ಕಾವೇರಿಯಿಂದಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಸಿಎಂ ಬಿಎಸ್ವೈ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಎರಡು ದಿನಗಳ ನಂತರ ನಡೆಯಲಿರುವ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಗಳ ಸಿದ್ಧತೆ, ಪಕ್ಷ ಸಂಘಟನೆ ಬಗ್ಗೆ ಇಂದಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆಯಿದೆ.
ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಿಎಂ ಭಾಷಣ :ಸಭೆ ಉದ್ಘಾಟಿಸಿ ಮಾತನಾಡಿದ ಸಿಎಂಬಿ.ಎಸ್ ಯಡಿಯೂರಪ್ಪ, ಕೋವಿಡ್ನಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿದೆ. 2,500 ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ. ಅನಾಥ ಮಕ್ಕಳಿಗೆ ಬಾಲಸೇವಾ ಯೋಜನೆ ಜಾರಿಗೆ ತರಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದರು.
ಏನೆಲ್ಲ ಚರ್ಚೆ :ಕಾರ್ಯಕಾರಿಣಿಯ ಬಳಿಕ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾಹಿತಿ ನೀಡಿದರು. ಕೇಂದ್ರ, ರಾಜ್ಯ ಸರ್ಕಾರಗಳ ಕೋವಿಡ್ ನಿರ್ವಹಣೆ, ಪಶ್ಚಿಮ ಬಂಗಾಳದ ಚುನಾವಣಾ ಪೂರ್ವ ಹಿಂಸಾಚಾರದ ಬಗ್ಗೆ ಚರ್ಚಿಸಲಾಗಿದೆ ಎಂದು ಕಾರ್ಣಿಕ್ ಮಾಹಿತಿ ನೀಡಿದರು. ಕಾಶ್ಮೀರ ಮಾದರಿಯಲ್ಲಿ ಬಂಗಾಳ ಆಗಬಾರದು. ಆ ರೀತಿಯಲ್ಲಿ ಕ್ರಮಕೈಗೊಳ್ಳುವಂತೆ ಪ್ರಧಾನಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದರು.
ಮಧ್ಯಾಹ್ನದ ಬಳಿಕ, ಕೋವಿಡ್ ಮೂರನೇ ಅಲೆ, ಸೇವಾಹಿ ಸಂಘಟೆಯ ಮೂಲಕ ತೊಡಗಿಸಿಕೊಳ್ಳುವುದು, ಪಕ್ಷ ಸಂಘಟನೆ, ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರದ ಮೇಲೆ ಮಾಡುತ್ತಿರುವ ಆರೋಪಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ ಗಣೇಶ್ ಕಾರ್ಣಿಕ್ ತಿಳಿಸಿದರು.