ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವಕ್ಕೆ ನಿಜವಾದ ಅಗ್ನಿ ಪರೀಕ್ಷೆ ಗುರುವಾರದಿಂದ ಆರಂಭವಾದಂತಾಗಿದೆ. ಯಡಿಯೂರಪ್ಪ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂಬ ಕೂಗಿನ ಬೆನ್ನಲ್ಲೇ ರಾಜ್ಯಕ್ಕೆ ಆಗಮಿಸಿರುವ ಉಸ್ತುವಾರಿ ಅರುಣ್ ಸಿಂಗ್ ಪ್ರತ್ಯೇಕವಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಆ ಮೂಲಕ ಯಡಿಯೂರಪ್ಪ ಅವರ ಅಗ್ನಿ ಪರೀಕ್ಷೆ ನಡೆಯುವಂತಾಗಿದೆ. ರಾಜ್ಯ ಬಿಜೆಪಿ ಹೊಣೆ ಹೊತ್ತ ಅರುಣ್ ಸಿಂಗ್ ವರಿಷ್ಠರ ಸ್ಪಷ್ಟ ಸೂಚನೆಯೊಂದಿಗೆ ಬುಧವಾರ ರಾಜ್ಯಕ್ಕೆ ಆಗಮಿಸಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವರೊಂದಿಗೆ ಚರ್ಚಿಸಿದ್ದಾರೆ. ಈ ಬಾರಿಯ ಅವರ ಭೇಟಿಯ ಸಂದರ್ಭದಲ್ಲಿ ಶಾಸಕಾಂಗ ಸಭೆ ಕರೆದು ಶಾಸಕರ ಅಭಿಪ್ರಾಯ ಆಲಿಸಬಹುದು ಎಂಬುದು ಯಡಿಯೂರಪ್ಪ ಅವರ ಇಂಗಿತವಾಗಿತ್ತು. ಆದರೆ ಶಾಸಕಾಂಗ ಸಭೆಯಲ್ಲಿ ಎಲ್ಲರೂ ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಲಾಗುವುದಿಲ್ಲ. ಹೀಗಾಗಿ ಪ್ರತ್ಯೇಕವಾಗಿ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಭಿನ್ನರು ಧ್ವನಿ ಎತ್ತಿದ್ದರು.
ಹಾಗಾಗಿ, ಗುರುವಾರ ಮತ್ತು ಶುಕ್ರವಾರ ಶಾಸಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಲು ಅರುಣ್ ಸಿಂಗ್ ನಿರ್ಧರಿಸಿದ್ದಾರೆ. ಇದೇ ರೀತಿ ಶಾಸಕರ ಅಭಿಪ್ರಾಯ ಸಂಗ್ರಹಿಸುವಾಗ ತಮ್ಮ ಉಪಸ್ಥಿತಿಗೆ ಅವಕಾಶ ಇರಬೇಕೆಂದು ಯಡಿಯೂರಪ್ಪ ಬಯಸಿದ್ದರಾದರೂ ಭಿನ್ನರ ಆಕ್ಷೇಪದ ಹಿನ್ನೆಲೆ ಅದಕ್ಕೂ ಅವಕಾಶ ನೀಡದಿರಲು ಅರುಣ್ ಸಿಂಗ್ ನಿರ್ಧರಿಸಿದ್ದಾರೆ.
ಮತ್ತೋರ್ವ ಲಿಂಗಾಯತ ನಾಯಕನಿಗೆ ಹುಡುಕಾಟ
ಹೀಗಾಗಿ ಅರುಣ್ ಸಿಂಗ್ ಬಂದ ಮೇಲೆ ಯಡಿಯೂರಪ್ಪ ಪರ ಗುಂಪಿನ ಕೈಮೇಲಾದಂತೆ ಎಂದು ನಿರೀಕ್ಷಿಸಲಾಗಿತ್ತಾದರೂ, ಮೊದಲ ದಿನವೇ ಭಿನ್ನರ ಶಿಬಿರದಲ್ಲಿ ಹರ್ಷದ ವಾತಾವರಣ ಕಾಣಿಸಿಕೊಂಡಿದೆ. ಈ ಮಧ್ಯೆ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಹೆಚ್.ವಿಶ್ವನಾಥ್ ಸೇರಿದಂತೆ 15 ಮಂದಿ ಶಾಸಕರು ಪ್ರತ್ಯೇಕ ಸಭೆ ನಡೆಸಿ, ಯಡಿಯೂರಪ್ಪ ಬದಲಾವಣೆಗೆ ಆಗ್ರಹಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.