ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ರಾಜ್ಯ ಸರ್ಕಾರದ ಆಪತ್ಕಾಲಿನ ನಿಧಿಯನ್ನು 50 ಕೋಟಿ ರೂ. ಗಳಿಂದ 500 ಕೋಟಿ ರೂಗೆ ಹೆಚ್ಚಳ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.
ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ನಿರ್ವಹಣೆ ಸೇರಿದಂತೆ ಹಲವು ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.ಗುತ್ತಿಗೆ ವೈದ್ಯರ ಖಾಯಂಗೆ ಷರತ್ತು ಬದ್ಧ ಒಪ್ಪಿಗೆಯನ್ನು ನೀಡುವ ಮೂಲಕ 507 ಗುತ್ತಿಗೆ ವೈದ್ಯರ ಬೇಡಿಕೆಗೆ ಸಂಪುಟ ಅನುಮೋದನೆ ನೀಡಲಿದೆ.
ಸಿಎಂ ನೇತೃತ್ವದಲ್ಲಿಂದು ಸಚಿವ ಸಂಪುಟ ಸಭೆ ಕೋವಿಡ್-19 ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ತುರ್ತು ಕ್ರಮಗಳು ಮತ್ತು ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಕೋವಿಡ್ ಕೇರ್ ಸೆಂಟರ್, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು. ಸೋಂಕಿತರನ್ನು ಆಸ್ಪತ್ರೆಗಳಿಗೆ ಸಾಗಾಣಿಕೆ ಮಾಡಲು ಅಗತ್ಯ 500ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಖರೀದಿ, ವೈದ್ಯರು, ನರ್ಸ್ಗಳು,ಅರೆ ವೈದ್ಯಕೀಯ ಸಿಬ್ಬಂದಿ ನೇರ ನೇಮಕಾತಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಬಂಡವಾಳ ಹೂಡಲು ಅನುಕೂಲವಾಗುವಂತೆ ಮಧ್ಯವರ್ತಿಯಾಗಿ ಹಾಗೂ ಜ್ಞಾನಾಧಾರಿತ ಸಹಯೋಗಕ್ಕಾಗಿ ಖಾಸಗಿ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಪ್ರೈವೇಟ್ ಲಿಮಿಟೆಡ್ ಏಜೆನ್ಸಿಯನ್ನು 12 ತಿಂಗಳು ಮುಂದುವರೆಸಲು ಸಂಪುಟ ಗ್ರೀನ್ ಸಿಗ್ನಲ್ ನೀಡಲಿದೆ.
ಹೊಸ ಕೈಗಾರಿಕಾ ನೀತಿಗೆ ಗ್ರೀನ್ ಸಿಗ್ನಲ್!
2020-25ನೇ ಸಾಲಿನ ನೂತನ ಕೈಗಾರಿಕಾ ನೀತಿಗೂ ಸಚಿವ ಸಂಪುಟ ಸಭೆ ಸಮ್ಮತಿ ನೀಡಲಿದೆ. ಹಿಂದಿನ ಸರ್ಕಾ ರದ ಕೈಗಾರಿಕಾ ನೀತಿ ಹಾಗೂ ದಕ್ಷಿಣ ಭಾರತದ ಹಲವು ರಾಜ್ಯಗಳ ಕೈಗಾರಿಕಾ ನೀತಿಗಳನ್ನು, ಸ್ಟಾರ್ಟ್ಸ್ ಅಪ್ಗಳನ್ನು, ಐಟಿ ಬಿಟಿ, ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿಯೂ ಕೈಗಾರಿಕಾ ಆರಂಭಿಸಲು ಅವಕಾಶ ಕಲ್ಪಿಸುವುದು ನೂತನ ಕೈಗಾರಿಕಾ ನೀತಿಯ ಭಾಗವಾಗಿರಲಿದೆ. ಮೇಡ್ ಇನ್ ಇಂಡಿಯಾಗೆ ಒತ್ತು ನೀಡಿ ಚೀನಾದಿಂದ ಬಂಡವಾಳ ವಾಪಸ್ ತೆಗೆಯುತ್ತಿರುವ ಕಂಪನಿಗಳಿಗೆ ರಾಜ್ಯದಲ್ಲಿ ಒತ್ತು ನೀಡುವುದರ ಜೊತೆಗೆ ಅಗತ್ಯ ಸೌಲಭ್ಯ, ರಿಯಾಯಿತಿಗಳನ್ನು ನೀಡುವ ಮಹತ್ವದ ಕೈಗಾರಿಕಾ ನೀತಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಲಿದೆ ಎನ್ನಲಾಗಿದೆ.
184.37 ಕೋಟಿ ರೂ ಮೊತ್ತದಲ್ಲಿ ಇ ಪ್ರೊಕ್ಯೂರ್ಮೆಂಟ್ 2.0 ಯೋಜನೆಯನ್ನು ‘ಅಭಿವೃದ್ದಿ ಮತ್ತು ಅನುಷ್ಠಾನ’ಕ್ಕೆ ತರಲು ಸಾರ್ವಜ ನಿಕ,ಸರ್ಕಾರಿ ಸಹಭಾಗಿತ್ವದಲ್ಲಿ(ಪಿಪಿಪಿ) ಮಾದರಿ ರೂಪಿಸಲು ಸಂಪುಟ ಸಭೆ ಒಪ್ಪಿಗೆ ನೀಡಲಿದೆ ಎಂದು ತಿಳಿದು ಬಂದಿದೆ.
ಕೊರೊನಾ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯು ಈಗಾಗಲೇ ಖರೀದಿಸಿರುವ ಉಪಕರಣಗಳು,ವೈದ್ಯಕೀಯ ಸಲಕರಣೆ,ಔಷಧಕ್ಕೆ ಅನುಮೋದನೆ ನೀಡಲಿದೆ. ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಯಿಂದ ಬಿಡುಗಡೆಯಾಗಿರುವ ಅನುದಾನವನ್ನು ಜಿಲ್ಲಾ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೈಲೆವೆಲ್ ಆಕ್ಸಿಜನ್ ಪೈಪ್ ಲೈನ್ ಅಳವಡಿಸುವ ಯೋಜನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.