ಕರ್ನಾಟಕ

karnataka

ETV Bharat / state

ಅಭಿವೃದ್ಧಿಯ ಮುನ್ನೋಟ ತೆರೆದಿಡುತ್ತಾ ಬಿಎಸ್​ವೈ ಬಜೆಟ್? - ಬಜೆಟ್

ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, 2020-21ನೇ ಸಾಲಿನ ಬಜೆಟ್ ಮಂಡಿಸಲಿದ್ದು ಮುಂದಿನ ವರ್ಷದ ಅಭಿವೃದ್ಧಿಯ ಮುನ್ನೋಟವನ್ನು ಇಲ್ಲಿ ನೋಡಬಹುದು.

ಬಿಜೆಪಿ ಸರ್ಕಾರದ ಬಜೆಟ್
ಬಿಜೆಪಿ ಸರ್ಕಾರದ ಬಜೆಟ್

By

Published : Mar 4, 2020, 10:35 PM IST

Updated : Mar 5, 2020, 7:16 AM IST

ಬೆಂಗಳೂರು:ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ಹೊಸತನ ಸೃಷ್ಟಿಸಿದ್ದ ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪನವರು ಇಂದು ಬಿಜೆಪಿ ಸರ್ಕಾರದ 2020-21ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.

ಏಳನೇ ಬಜೆಟ್‌ ಮಂಡಿಸುವ ತಯಾರಿಯಲ್ಲಿರುವ ಸಿಎಂ ಯಡಿಯೂರಪ್ಪ, ಕೃಷಿ, ಕೈಗಾರಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಒತ್ತು ನೀಡಿದ್ದು, ಈ ಬಾರಿ ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಅಸ್ಸೋಂ, ಕೇರಳ ಹಾಗೂ ಬಿಹಾರ ರಾಜ್ಯಗಳು ಪ್ರತ್ಯೇಕ ಮಕ್ಕಳ ಬಜೆಟ್ ಮಂಡಿಸಿವೆ. ಅದೇ ರೀತಿ ಸಿಎಂ ಯಡಿಯೂರಪ್ಪ ಮಕ್ಕಳ ಬಜೆಟ್ ಮಂಡಿಸಿ, ರಾಜ್ಯದಲ್ಲಿ ಮತ್ತೊಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ತಮ್ಮ ಇಲಾಖೆ ವ್ಯಾಪ್ತಿಗೆ ಬರುವ ಮಕ್ಕಳ ಕೇಂದ್ರಿತ ಯೋಜನೆ, ಕಾರ್ಯಕ್ರಮಗಳ ವಿವರ, ಅನುದಾನ ಹಂಚಿಕೆ, ಖರ್ಚು, ಕಾರ್ಯನೀತಿಯನ್ನು ವಿವರಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದರು. ಮಕ್ಕಳ ಯೋಜನೆಗಳ ಮೇಲ್ವಿಚಾರಣೆ ಪಂಚಾಯ್ತಿಗಳಿಗೆ ಜಿಲ್ಲಾ ಮತ್ತು ಗ್ರಾಮ ಪಂಚಾಯ್ತಿಗಳ ಹಂತದ ಸಂಸ್ಥೆಯಲ್ಲಿಯೇ ಮಕ್ಕಳ ಕುರಿತಾದ ಸರ್ಕಾರದ ಯೋಜನೆಗಳ ಮೇಲ್ವಿಚಾರಣೆ ಮತ್ತು ಅನುದಾನ ಹಂಚಿಕೆ ಹಾಗೂ ವೆಚ್ಚಗಳ ನಿರ್ವಹಣೆ ಕುರಿತಂತೆ ನಿಗಾವಹಿಸಲು ಬಜೆಟ್‍ನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರದ ಎಲ್ಲಾ ಇಲಾಖೆಗಳು ತಮ್ಮ ಇಲಾಖೆಯಡಿ ಮಕ್ಕಳ ಕಾರ್ಯಕ್ರಮಗಳಿಗೆ ಹಂಚಿಕೆಯಾಗಿರುವ ಒಟ್ಟು ಅನುದಾನ, ವೆಚ್ಚಗಳು ಹಾಗೂ ಅನುಷ್ಠಾನದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಕೊಡಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

2020-21ನೇ ಆರ್ಥಿಕ ವರ್ಷದಿಂದ ಮೊದಲ ಬಾರಿ ಮಕ್ಕಳ ಆಯವ್ಯಯ ಮಂಡನೆ ಮಾಡಲು ಸರ್ಕಾರ ನಿರ್ಣಯ ಕೈಗೊಂಡಿದೆ. ಒಟ್ಟು ಬಜೆಟ್‍ನಲ್ಲಿ ಮಕ್ಕಳ ಅಭಿವೃದ್ಧಿಗೆ ಒದಗಿಸಲಾಗುತ್ತಿರುವ ಅನುದಾನದ ಪರಿಶೀಲನೆ ಮಾಡುವುದು ಹಾಗೂ ಮಕ್ಕಳ ಅಭ್ಯುದಯಕ್ಕೆ ಬೇಕಾದ ಯೋಜನೆಗಳನ್ನು ರೂಪಿಸುವುದು, ಮಕ್ಕಳ ಬಜೆಟ್‍ನ ಮುಖ್ಯ ಉದ್ದೇಶವಾಗಿದೆ ಎನ್ನಲಾಗಿದೆ.

2019-20ನೇ ಸಾಲಿನ ಬಜೆಟ್‌ ನಂತೆ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತ 3,27,209 ಕೋಟಿ ರೂ. ಇದ್ದು, ಇದು ಬಜೆಟ್‌ ಗಾತ್ರಕ್ಕಿಂತಲೂ ಹೆಚ್ಚಿದೆ. ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ್ದ (2019-20 ನೇ ಸಾಲಿನ ) ಬಜೆಟ್​ನ ಒಟ್ಟು ಗಾತ್ರ 2, 34, 153 ಕೋಟಿ ರೂ. ಇದೆ. ಆದರೆ ಈಗ ಯಡಿಯೂರಪ್ಪನವರು ನಾಳೆ ಮಂಡಿಸುತ್ತಿರುವ ಬಜೆಟ್ ಗಾತ್ರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಸರ್ಕಾರಿ ನಿವಾಸದ ಬದಲು ಖಾಸಗಿ ನಿವಾಸದಿಂದಲೇ ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ ಆಗಮಿಸಲಿರುವ ಸಿಎಂ ಯಡಿಯೂರಪ್ಪ

• ನಾಳೆ ಬೆಳಗ್ಗೆ 10.30 ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಗೆ ಒಪ್ಪಿಗೆ

• ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ

• ಕೃಷಿ, ಕೈಗಾರಿಕೆ, ನೀರಾವರಿಗೆ ಹೆಚ್ಚಿನ ಆದ್ಯತೆ

ಖಚಿತ • ಪ್ರತ್ಯೇಕ ಮಕ್ಕಳ ಬಜೆಟ್ ಮಂಡನೆ ಸಾಧ್ಯತೆ

• ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಮೊತ್ತ ಹೆಚ್ಚಳದ ನಿರೀಕ್ಷೆ

• ಆಲಮಟ್ಟಿ ಅಣೆಕಟ್ಟಿನ ಎತ್ತರಕ್ಕೆ ಅನುದಾನ ಬಿಡುಗಡೆ ಸಾಧ್ಯತೆ

• ಮಹದಾಯಿ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ಮಂಜೂರು

• ಎತ್ತಿನ ಹೊಳೆ ಭೂಸ್ವಾಧೀನಕ್ಕೆ ಬಾಕಿ ಹಣ ಬಿಡುಗಡೆ

• ಕೆ.ಸಿ.ವ್ಯಾಲಿ ನೀರನ್ನು 400 ಎಂಎಲ್​ಡಿಗೆ ಹೆಚ್ಚಿಸಲು ಅನುದಾನ ಬಿಡುಗಡೆ ಸಾಧ್ಯತೆ

• ಕೃಷ್ಣಾ ಬಿ ಸ್ಕೀಮ್ ಯೋಜನೆಗೆ ಹೆಚ್ಚು ಅನುದಾನ ಮಂಜೂರು

• ಡೀಸೆಲ್, ಪೆಟ್ರೋಲ್ ಮೇಲಿನ ಸೆಸ್ ಏರಿಕೆ ಸಾಧ್ಯತೆ

• ಮದ್ಯದ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಸಾಧ್ಯತೆ

• ಬೀಡಿ, ಸಿಗರೆಟ್ ದರ ಹೆಚ್ಚಳ ಸಾಧ್ಯತೆ

• ತಮ್ಮ ಹಳೆಯ ಯೋಜನೆಗಳಾದ ಸೈಕಲ್ ವಿತರಣೆ, ಭಾಗಲಕ್ಷ್ಮಿ ಯೋಜನೆ ಸೇರಿದಂತೆ ಇತರೆ ಯೋಜನೆಗಳನ್ನು ಬಜೆಟ್‍ನಲ್ಲಿ ಘೋಷಣೆ ನಿರೀಕ್ಷೆ.

• ರೈತರಿಗೆ, ವೃದ್ಧರಿಗೆ, ಮಹಿಳೆಯರಿಗೆ ಸಹಕಾರಿಯಾಗುವಂತಹ ಕಾರ್ಯಕ್ರಮ ಪ್ರಕಟಿಸುವ ಸಾಧ್ಯತೆ

• ಅಸಂಘಟಿತ ವಲಯದ ಕಾರ್ಮಿಕರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಆರೋಗ್ಯಭಾಗ್ಯ ಯೋಜನೆಯನ್ನು ಘೋಷಣೆ ಸಾಧ್ಯತೆ

• ನೀರಾವರಿ, ಕೃಷಿ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ

• ಹಿಂದುಳಿದ ವರ್ಗ, ಪರಿಶಿಷ್ಟಜಾತಿ/ವರ್ಗಗಳಿಗೆ ವಿಶೇಷ ಒತ್ತು

• ಕೃಷಿ ಯಾಂತ್ರೀಕರಣ ಹಾಗೂ ಹನಿ ನೀರಾವರಿಗಳಿಗೆ ಹೆಚ್ಚು ಒತ್ತು

• ಸಾವಯವ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತಿಗೆ ಉತ್ತೇಜನ

• ಸುಮಾರು 100 ತಾಲೂಕುಗಳಲ್ಲಿನ ಬರ ತಡೆಗಟ್ಟಲು ಹೊಸ ಜಲಾನಯನ ಅಭಿವೃದ್ಧಿ ಯೋಜನೆ ಘೋಷಣೆ ಸಾಧ್ಯತೆ

ಬಜೆಟ್​ಗೆ ಸಾಲದ ಭಾರ :

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಡಿಸಲಿರುವ ಬಜೆಟ್​ಗೆ ಸಾಲದ ಭಾರ ಸವಾಲಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಯಾವುದೇ ಹೊಸ ಯೋಜನೆ ಪ್ರಕಟಿಸಬಾರದೆಂದು ಹಣಕಾಸು ಇಲಾಖೆ ಸಲಹೆ ನೀಡಿದೆ. ಸಾಲವೂ ಹೆಚ್ಚಾಗಿದೆ. ತೆರಿಗೆ ಹೆಚ್ಚಳ ಮಾಡಲೇಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿರುವುದರಿಂದ ನಾಳಿನ ಬಜೆಟ್ ಜನಸಾಮಾನ್ಯರ ಪಾಲಿಗೆ ತೆರಿಗೆ ಭಾರದ ಆಯವ್ಯಯವಾಗಲಿದೆ. ಇದೆಲ್ಲವನ್ನೂ ಯಡಿಯೂರಪ್ಪನವರು ಹೇಗೆ ಸರಿದೂಗಿಸುತ್ತಾರೆ ಎಂಬುದೇ ಕುತೂಹಲದ ಸಂಗತಿ.

Last Updated : Mar 5, 2020, 7:16 AM IST

ABOUT THE AUTHOR

...view details