ಕರ್ನಾಟಕ

karnataka

ಪರಿಸರ ಮಾಲಿನ್ಯ ಕಡಿಮೆಯಾಗಿದೆ, ಪ್ರಕೃತಿ ಪುನಶ್ಚೇತನಕ್ಕಿದು ಸದಾವಕಾಶ: ಬಿಎಸ್​​ವೈ

ಪರಿಸರ ದಿನಾಚರಣೆ ಅಂಗವಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಭಾಷಣ ಮಾಡಿದ‌ ಸಿಎಂ, ಸಮಸ್ತ ಜನತೆಗೆ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು. “ಜೀವ ವೈವಿಧ್ಯ” ಈ ವರ್ಷದ ಘೋಷವಾಕ್ಯವಾಗಿರುವುದು ಅತ್ಯಂತ ಔಚಿತ್ಯಪೂರ್ಣ ಎಂದು ತಿಳಿಸಿದ್ದಾರೆ.

By

Published : Jun 5, 2020, 1:22 PM IST

Published : Jun 5, 2020, 1:22 PM IST

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಕೋವಿಡ್-19 ತಡೆಗಟ್ಟಲು ಲಾಕ್‍ಡೌನ್ ಮಾಡಿದ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಗಮನಾರ್ಹವಾಗಿ ಕಡಿಮೆಯಾಗಿದೆ. ಮನುಷ್ಯನಿಗೆ ತೊಂದರೆಯಾದರೂ ಪ್ರಕೃತಿ ಪುನಶ್ಚೇತನಗೊಳ್ಳಲು ಇದೊಂದು ಸದಾವಕಾಶವಾಯಿತು. ಹಸಿರು ನಮ್ಮ ಉಸಿರಾದಾಗ ಮಾತ್ರ ವಿಶ್ವ ಪರಿಸರ ದಿನಾಚರಣೆ ಅರ್ಥಪೂರ್ಣವಾಗಿರುತ್ತದೆ. ಈ ದಿಸೆಯಲ್ಲಿ ನಾವೆಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.

ಪರಿಸರ ದಿನಾಚರಣೆ ಅಂಗವಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಭಾಷಣ ಮಾಡಿದ‌ ಸಿಎಂ, “ಜೀವ ವೈವಿಧ್ಯ” ಈ ವರ್ಷದ ಘೋಷವಾಕ್ಯವಾಗಿರುವುದು ಅತ್ಯಂತ ಔಚಿತ್ಯಪೂರ್ಣ. ಜೀವ ವೈವಿಧ್ಯತೆ ಇದ್ದರಷ್ಟೇ ಪ್ರಕೃತಿಯ ಸಮತೋಲನ ಸಾಧ್ಯ. ಪ್ರಾಣಿ, ಪಕ್ಷಿಗಳು, ಗಿಡಮರಗಳು, ಸಸ್ಯ ಸಂಪತ್ತು, ಪರ್ವತಗಳು, ಜಲಚರಗಳೆಲ್ಲವೂ ನಮ್ಮ ಬದುಕಿನ ಭಾಗಗಳೇ.

ಗಾಳಿ, ನೀರು, ಭೂಮಿ, ಆಕಾಶ, ಸ್ವಚ್ಛವಾಗಿದ್ದರೆ ಮಾತ್ರ ನಮ್ಮ ಜೀವನ ಆರೋಗ್ಯವಾಗಿರುತ್ತದೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಗಿಡಮರಗಳನ್ನು ನೆಟ್ಟು ಬೆಳಸಿದರೆ ಒಂದು ದೇವಾಲಯವನ್ನೇ ಕಟ್ಟಿದಷ್ಟೂ ಪುಣ್ಯ ಲಭಿಸುತ್ತದೆ. ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಬಹುದೊಡ್ಡ ಬಳುವಳಿಯೇ ಉತ್ತಮ ಪರಿಸರ ಎಂದಿದ್ದಾರೆ.

ಪ್ರಕೃತಿಯನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಆಧುನಿಕ ಜೀವನ ಶೈಲಿಯಿಂದ ಪರಿಸರದ ಅಪರೂಪದ ಪ್ರಾಣಿ-ಪಕ್ಷಿಗಳನ್ನು ನಾವಿಂದು ಕಳೆದುಕೊಂಡಿದ್ದೇವೆ. ಇದರಿಂದ ಪ್ರಕೃತಿಯಲ್ಲಿ ಅಸಮತೋಲನ ಹೆಚ್ಚಾಗುತ್ತಿದೆ. ‘ಪ್ರಕೃತಿಯು ಮನುಷ್ಯನ ಅಗತ್ಯತೆಗಳನ್ನು ಪೂರೈಸಬಲ್ಲದೇ ಹೊರತು ಮನುಷ್ಯನ ದುರಾಸೆಗಳನ್ನಲ್ಲ’ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ ಮಾತು ಸದಾ ಕಾಲಕ್ಕೂ ಪ್ರಸ್ತುತವಾದುದು.

ನಿಸರ್ಗ ಹಾಗೂ ಪರಿಸರ ನಮ್ಮ ಬದುಕಿನ ಭಾಗ. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಿ ಪರಿಸರ ಸಂರಕ್ಷಣೆ ಮಾಡವುದಲ್ಲದೆ ಜೀವ ವೈವಿಧ್ಯವನ್ನು ರಕ್ಷಿಸಬೇಕು. ನಾವು ಪರಿಸರದೊಂದಿಗೆ ಸಾಮರಸ್ಯ ಸಾಧಿಸಿದರೆ ಮಾತ್ರ ಸಮತೋಲನದ ಬದುಕು ಸಾಧ್ಯ. ಮಿತಿಮೀರಿದ ಸಂಪನ್ಮೂಲಗಳ ಬಳಕೆ ಯಾವತ್ತೂ ಅಪಾಯಕ್ಕೆ ರಹದಾರಿ ಎಂಬ ಅರಿವು ನಮಗಿರಬೇಕು ಎಂದು ತಿಳಿಸಿದ್ದಾರೆ.

ABOUT THE AUTHOR

...view details