ಬೆಂಗಳೂರು:ಕೊರೊನಾ ನಿಯಂತ್ರಣ ಕುರಿತು ಬೆಂಗಳೂರಿನ ಶಾಸಕರು ಹಾಗೂ ಸಚಿವರ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಲಾಕ್ಡೌನ್ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಆರ್ಥಿಕ ಸಮಸ್ಯೆ ಕಾರಣ ಮುಂದೊಡ್ಡಿ ಲಾಕ್ಡೌನ್ ಜಾರಿಯನ್ನು ನಿರಾಕರಣೆ ಮಾಡಿದ್ದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಬೆಂಗಳೂರಿನ ಶಾಸಕರು, ಸಚಿವರ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಎಲ್ಲರೂ ಸಲಹೆ ನೀಡುವ ಜೊತೆಯಲ್ಲಿ ಸಮುದಾಯಕ್ಕೆ ಹರಡುವ ಆತಂಕ ವ್ಯಕ್ತಪಡಿಸಿದರು. ಲಾಕ್ಡೌನ್ ಜಾರಿ ಮಾಡುವುದು ಸೂಕ್ತ ಎಂದು ತಿಳಿಸಿದರು. ಆದರೆ ಲಾಕ್ಡೌನ್ಗೆ ಸರ್ಕಾರ ಒಪ್ಪಿಗೆ ನೀಡದ ಹಿನ್ನಲೆಯಲ್ಲಿ ಸಭೆಯಿಂದ ನಿರ್ಗಮಿಸಿದರು.
ಸಭೆ ಮುಗಿಸಿ ಹೊರಡುವ ವೇಳೆ ಮಾತನಾಡಿದ ಶಾಸಕ ಎನ್.ಎ. ಹ್ಯಾರಿಸ್, ಕಮ್ಯುನಿಟಿ ಸ್ಪ್ರೆಡ್ ಶುರುವಾಗಿದ್ದರೂ ಲಾಕ್ಡೌನ್ ಮಾಡಲ್ಲವೆಂದು ಸಭೆಯಲ್ಲಿ ಸರ್ಕಾರ ಹೇಳಿದೆ. ನಾವು ಪ್ರತಿಯೊಬ್ಬರ ಪ್ರಾಣ ಕಾಪಾಡಬೇಕಿದೆ. ಲಾಕ್ಡೌನ್ ಮಾಡಲ್ಲ, ಎಕನಾಮಿಕ್ ಕ್ರೈಸಿಸ್ ಆಗುತ್ತದೆ ಅಂದ್ರೆ ಏನು ಮಾಡಲಿಕ್ಕೆ ಆಗಲ್ಲ, ಮಳೆ ಬಂದ ಮೇಲೆ ಕೊಡೆ ಹಿಡಿಯೋ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಭೆ ಕರೆದಿದ್ದಕ್ಕೆ ನಾವು ಸಿಎಂಗೆ ಧನ್ಯವಾದ ಹೇಳುತ್ತೇವೆ, ಆದರೆ ಸಭೆ ಸರಿಯಾಗಿ ಆಗಿಲ್ಲ ಎಂದಿದ್ದಾರೆ. ಇದು ನನಗ್ಯಾಕೋ ಸರಿ ಅನಿಸುತ್ತಿಲ್ಲ, ವೈಯಕ್ತಿಕವಾಗಿ ನಾನು ಲಾಕ್ಡೌನ್ ಮಾಡಿ ಎಂದಿದ್ದೇನೆ. ಆದರೆ ಲಾಕ್ಡೌನ್ ಮಾಡಲ್ಲ, ಬೆಡ್ ಜಾಸ್ತಿ ಮಾಡುತ್ತೇವೆ ಎನ್ನುತ್ತಾರೆ. ಬೆಡ್ ಜಾಸ್ತಿ ಮಾಡುತ್ತಾರೆ ಅಂದರೆ ಕೊರೋನಾ ಜಾಸ್ತಿ ಆಗುತ್ತದೆ ಅಂತ ತಾನೆ. ಸಲಹೆ ತೆಗೆದುಕೊಂಡಿದ್ದಾರೆ ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ತಿಳಿಸಿದರು.