ಬೆಂಗಳೂರು: ನಗರದ ಜವಾಹರಲಾಲ್ ನೆಹರು ತಾರಾಲಯದ ಮುಂಭಾಗದಲ್ಲಿರುವ ಮಿಲಿಟರಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುವ ಮೂಲಕ 22ನೇ ಕಾರ್ಗಿಲ್ ವಿಜಯೋತ್ಸವದಲ್ಲಿ ಸೇನಾ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗಿಯಾದರು.
ಇದೇ ಸಂದರ್ಭದಲ್ಲಿ ಶಕುಂತಲ ಬಂಡಾರ್ಕರ್ ಬರೆದಿರುವ ಲೆ.ಕರ್ನಲ್ ಅಜಿತ್ ಬಂಡಾರ್ಕರ್ ಜೀವನ ಚರಿತ್ರೆಯ ಪುಸ್ತಕ "ದಿ ಸಾಗಾ ಆಫ್ ಅ ಬ್ರೇವ್ ಹಾರ್ಟ್" ಬಿಡುಗಡೆಗೊಳಿಸಲಾಯಿತು. ಬಳಿಕ ಮಾತನಾಡಿದ ಸಿಎಂ ಬಿಎಸ್ವೈ 22ನೇ ಕಾರ್ಗಿಲ್ ವಿಜಯ ದಿವಸದಲ್ಲಿ ಭಾಗಿವಹಿಸಿದ್ದು ಸಂತಸವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ 527 ಹುತಾತ್ಮ ಯೋಧರನ್ನು ಸ್ಮರಿಸಿ ಅವರ ತ್ಯಾಗ, ಬಲಿದಾನಕ್ಕೆ ಕೃತಜ್ಞತೆ ಸಲ್ಲಿಸಬೇಕಾದ್ದು ನಮ್ಮ ಕರ್ತವ್ಯ ಎಂದರು.
ನಿವೃತ್ತ ಯೋಧರಿಗೆ ಸೌಲಭ್ಯ ನೀಡುವುದು ನಮ್ಮ ಕರ್ತವ್ಯ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೀರ ಯೋಧರು ದೇಶ ರಕ್ಷಿಸಿದ ಮಹತ್ವದ ದಿನವಿದು. ನಮ್ಮ ರಾಜ್ಯದಲ್ಲಿ ನಿವೃತ್ತ ಯೋಧರಿಗೆ ಹಾಗೂ ಯುದ್ಧ ಸಂತ್ರಸ್ತರಿಗೆ ಸೌಲಭ್ಯಗಳನ್ನು ನೀಡುವುದು ನಮ್ಮ ಕರ್ತವ್ಯ.
ಇವರ ಕುಟುಂಬಗಳಿಗೆ ಅನುಗ್ರಹ ಪೂರ್ವಕ ಅನುದಾನ, ಉಚಿತ ನಿವೇಶನ, ಜಮೀನು, ಮನೆ ನಿರ್ಮಾಣಕ್ಕೆ ಅನುದಾನ, ಬಸ್ ಪಾಸ್, ಹೆಣ್ಣು ಮಕ್ಕಳ ಮದುವೆಗೆ ಧನ ಸಹಾಯ, ಸರ್ಕಾರಿ ಕೆಲಸದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ದೇಶಕ್ಕಾಗಿ ಬಲಿದಾನಗೈಯುವ ಯೋಧರ ತ್ಯಾಗವನ್ನು ಈ ನಾಡು ಎಂದೆದಿಂಗೂ ಸ್ಮರಿಸುತ್ತದೆ ಎಂದರು. ಸಿಎಂಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಾಥ್ ನೀಡಿದರು.
ಇದನ್ನೂ ಓದಿ:22 ನೇ ಕಾರ್ಗಿಲ್ ವಿಜಯೋತ್ಸವ.. ಇತಿಹಾಸದತ್ತ ಒಂದು ನೋಟ..!