ಕರ್ನಾಟಕ

karnataka

ETV Bharat / state

ಆಡಳಿತ ಯಂತ್ರ ಚುರುಕುಗೊಳಿಸಲು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ - ಅಭಿವೃದ್ಧಿ ಕಾರ್ಯಗಳು ಸ್ಥಗಿತ

ಕೊರೊನಾದಿಂದಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಹಾಗೂ ಸ್ಥಗಿತಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.

CM BS Yeddyurappa holds meeting with officials
ಆಡಳಿತ ಯಂತ್ರ ಚುರುಕುಗೊಳಿಸಲು ಸಿಎಂ ಸೂಚನೆ

By

Published : Apr 23, 2020, 5:01 PM IST

ಬೆಂಗಳೂರು : ಕೋವಿಡ್-19​​ ನಂತರ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವುದನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಯಂತ್ರ ಚುರುಕುಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ವಿಧಾನಸೌಧದಲ್ಲಿ ಇಂದು ನಡೆಸಲಾಯಿತು.

ನಾಲ್ಕು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಹಲವು ಪ್ರಮುಖ ಅಂಶಗಳನ್ನು ಚರ್ಚಿಸಲಾಗಿದೆ.

ಸಭೆಯ ಮುಖ್ಯಾಂಶಗಳು :

ರೈತರು ಬೆಳೆದ ತರಕಾರಿಗಳು ಕೋವಿಡ್​ನಿಂದಾಗಿ ಬೆಲೆ‌ ಕಳೆದುಕೊಂಡಿದ್ದು, ಅದನ್ನು ನಾವೇ ಕೊಂಡುಕೊಂಡು ಕೋಲ್ಡ್ ಸ್ಟೋರೇಜ್​ನಲ್ಲಿ ಇಟ್ಟು ತದ‌ನಂತರ‌ ಮಾರಾಟ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ. ಹೆಚ್ಚು ದಿನ‌ ಇಡೋದಕ್ಕೆ‌ ಸಾಧ್ಯವಾಗದ ತರಕಾರಿಗಳು ಹಾಗೂ ಹಣ್ಣುಗಳು ಸೇರಿದಂತೆ ರೈತರು‌ ಬೆಳೆಯುವ ಬೆಳೆಗಳನ್ನು ಇತರ ರಾಜ್ಯಗಳಿಗೆ ಮತ್ತು ಹೊರದೇಶಗಳಿಗೆ ಕಳುಹಿಸಿ‌ ಮಾರಾಟ‌‌ ಮಾಡುವಂತೆ ಸೂಚನೆ‌‌ ನೀಡಿರುವ ಬಿಎಸ್​ವೈ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಎಲ್ಲೆಲ್ಲಿ ನೀರಿನ ಅಭಾವವಿದೆಯೋ ಅಲ್ಲಲ್ಲಿ ತುರ್ತಾಗಿ ನೀರಿನ‌ ಸರಬರಾಜು ಮಾಡುವಂತೆ ಸೂಚನೆ‌ ನೀಡಿದ್ದಾರೆ.

ಕೋವಿಡ್ ಬಗ್ಗೆ ಗ್ರಾಮ ಮಟ್ಟದಲ್ಲಿ ಟಾಸ್ಟ್ ಪೋರ್ಸ್ ರಚನೆ‌ ಮಾಡಲಾಗಿದ್ದು, ಅದನ್ನು ಇನ್ನಷ್ಟು ಚುರುಕುಗೊಳಿಸಲು ಸೂಚನೆ‌ ನೀಡಿದ ಅವರು, ಇದೇ ವೇಳೆ, ಕೇಂದ್ರ ಸಚಿವ ಸದಾನಂದಗೌಡರಿಗೆ ಕರೆ‌ಮಾಡಿ ಗೊಬ್ಬರಕ್ಕೆ ಸಂಬಂಧಿಸಿದಂತೆ ಮಾಹಿತಿ‌ ಪಡೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ‌‌ ಕಡಿಮೆ‌ ಇರುವುದರಿಂದ ಇರುವ ಬೆಲೆಗಿಂತ ರೈತರಿಗೆ ಕಡಿಮೆ ಬೆಲೆಗೆ ಗೊಬ್ಬರು ಮಾರಾಟ ಮಾಡಲಾಗುವುದು ಅನ್ನೋದನ್ನ ಕೇಂದ್ರ ಸಚಿವರು ಮನದಟ್ಟು‌ ಮಾಡಿದರು. ಇದನ್ನು ರೈತರಿಗೆ ಮನವರಿಕೆ ಮಾಡಿ ಆತಂಕ ದೂರು ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆಡಳಿತ ಯಂತ್ರ ಚುರುಕುಗೊಳಿಸಲು ಸಿಎಂ ಸೂಚನೆ

ನಗರಗಳಲ್ಲಿ ವಿವಿಧ ಸಂಘ- ಸಂಸ್ಥೆಗಳು ಸರ್ಕಾರಿ‌ ಜಾಗವನ್ನು ಲೀಸ್​ಗೆ ಪಡೆದು ಇದುವರೆಗೂ ಕೆಲಸ ಶುರು‌ ಮಾಡದೇ ಲೀಸ್ ಕಂಡಿಷನ್ ಉಲ್ಲಂಘನೆ‌ ಮಾಡಿದ ಜಾಗಗಳನ್ನು ಸರ್ಕಾರಕ್ಕೆ ವಾಪಸ್ ಪಡೆಯಬೇಕು. ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಡ್ಯಾಮ್​ಗಳಲ್ಲಿ ಹೆಚ್ಚು ನೀರು‌ ಸಂಗ್ರಹವಾಗಿದ್ದರೆ ಅದನ್ನು ರೈತರ ಬೆಳೆಗಳಿಗೆ‌‌ ಮತ್ತು‌ ಕುಡಿಯುವ ನೀರಿಗೆ ಹರಿಸಲು ಸೂಚನೆ ನೀಡಿದ್ದಾರೆ.

ಕಳೆದ ವರ್ಷ ಆದ ಅನಾಹುತ ಮತ್ತೆ‌‌ ಮರುಕಳಿಸದಂತೆ ಡ್ಯಾಮ್​ಗಳಲ್ಲಿ ನಿತ್ಯ ಲಭ್ಯವಿರುವ ನೀರಿನ‌ ಮಾಹಿತಿಯನ್ನು‌ ಪಡೆಯಲು ಸೂಚನೆ ನೀಡಲಾಯಿತು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೋವಿಡ್​​ನಿಂದಾಗಿ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಾಗೋದರಿಂದ ದೇಶಿಯ ಪ್ರವಾಸಿಗರನ್ನು ಆಕರ್ಷಣೆ‌ ಮಾಡುವತ್ತ ಗಮನ ಹರಿಸಬೇಕು. ಇದರ ಜೊತೆಗೆ ಅಲ್ಲಿ ಕೋವಿಡ್ ಇಲ್ಲ ಅನ್ನೋದನ್ನು‌ ಪ್ರವಾಸಿಗರಿಗೆ‌ ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕೆಂದು ನಿರ್ದೇಶನ ನೀಡಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಆನ್​ಲೈನ್ ತರಬೇತಿ ನೀಡಲು ಸೂಚನೆ‌ ನೀಡಲಾಯಿತು. ದೂರದರ್ಶನದ ಮೂಲಕ ಮಕ್ಕಳಿಗೆ ಪಾಠ ಸೇರಿದಂತೆ ಇತರ ಚಟುವಟಿಕೆಗಳನ್ನು ಶಾಲೆ ತೆರೆಯುವವರೆಗೂ ಮಕ್ಕಳಿಗೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆಡಳಿತ ಯಂತ್ರ ಚುರುಕುಗೊಳಿಸಲು ಸಿಎಂ ಸೂಚನೆ

ಸಾರಿಗೆ ಇಲಾಖೆಯಲ್ಲಿ‌ ಕೋವಿಡ್​ನಿಂದ ಬಸ್ ಸಂಚಾರ ಕಡಿಮೆ ಇರುವುದರಿಂದ ಕೆಎಸ್​ಆರ್​ಡಿಸಿ ನೂರಾರು ಕೋಟಿ ನಷ್ಟದಲ್ಲಿದೆ. ಹಾಗಾಗಿ ಬಸ್​ಗಳನ್ನು ಗೂಡ್ಸ್ ಸಾರಿಗೆಯಾಗಿ ಬಳಸಿಕೊಂಡು ಅದರ ಮೂಲಕ ಆದಾಯ ಪಡೆಯಬೇಕು. ಖಾಸಗಿ ಕಂಪನಿಗಳಿಗೆ ಬಸ್​ಗಳನ್ನು ಗುತ್ತಿಗೆ ಆದಾರದ ಮೇಲೆ ನೀಡಲು ತೀರ್ಮಾನಿಸಲಾಗಿದೆ. ಕಲ್ಯಾಣ ಕರ್ನಾಟಕ ಮತ್ತು ಇತರ ಅಭಿವೃದ್ಧಿ ಮಂಡಳಿಗೆಳ ಭಾಗದಲ್ಲಿ ತುರ್ತಾಗಿ ಆಗಬೇಕಾಗಿರೋ ಕೆಲಸ ಕಾರ್ಯಗಳನ್ನು ಮಾಡಲು ಸೂಚನೆ ನೀಡಲಾಯಿತು. ಇನ್ನು (ಆಸ್ಪತ್ರೆ ಶಿಕ್ಷಣ ಕುಡಿಯುವ ನೀರು ಇತರೆ) ಕೋವಿಡ್​​ಗಾಗಿ ಹಗಲಿರುಳು ದುಡಿಯುತ್ತಿರುವ ಗುತ್ತಿಗೆ ವೈದ್ಯರ ಸಂಬಳವನ್ನು ಗಣನೀಯವಾಗಿ ಹೆಚ್ಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯಲ್ಲಿ ಸಚಿವರಾದ ಸುರೇಶ್ ಕುಮಾರ್, ಡಾ.ಕೆ. ಸುಧಾಕರ್ , ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details