ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನಾಳೆ ಬೆಂಗಳೂರಿಗೆ ಆಗಮಿಸಲಿದ್ದು, ಯಾವ ಶಾಸಕರು ಬೇಕಾದರೂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರುಣ್ ಸಿಂಗ್ ಜತೆಗೆ ಮತ್ತೊಬ್ಬ ವೀಕ್ಷಕ ಬರಬೇಕು ಎಂಬ ಆಗ್ರಹ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಅನಗತ್ಯವಾದ ಪ್ರಶ್ನೆ ಕೇಳಬೇಡಿ. ಅರುಣ್ ಸಿಂಗ್ ನಮ್ಮ ರಾಜ್ಯದ ಉಸ್ತುವಾರಿಗಳು. ಅವರು ನಾಳೆ ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ನಮ್ಮ ಶಾಸಕರು, ಸಂಸದರ ಜತೆ ಚರ್ಚೆ ಮಾಡುತ್ತಾರೆ. ಯಾವುದೇ ಗೊಂದಲ ಇಲ್ಲ, ಯಾರು ಬೇಕಾದರೂ ಅವರನ್ನು ಭೇಟಿ ಮಾಡಬಹುದು. ಅವರು ಕೆಕೆ ಗೆಸ್ಟ್ ಹೌಸ್ನಲ್ಲಿದ್ದು, ಎಲ್ಲ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿ ತಿಳಿದುಕೊಳ್ಳಲಿದ್ದಾರೆ ಎಂದರು.
ನಾಯಕತ್ವ ಬದಲಾವಣೆ ವಿಚಾರ
ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಗೊಂದಲ ಇಲ್ಲ. ನಾನು ಕೂಡ ಅವರಿಗೆ ಎಲ್ಲ ರೀತಿಯ ಸಹಕಾರ ಕೊಡುತ್ತೇನೆ. ಯಾರೋ ಒಂದಿಬ್ಬರಿಗೆ ಬೇಸರ ಇರಬಹುದು. ಆದರೆ ಅವರನ್ನು ಕರೆದು ಅರುಣ್ ಸಿಂಗ್ ಮಾತನಾಡುತ್ತಾರೆ. ನಾಯಕತ್ವದ ಬಗ್ಗೆಯಾಗಲಿ, ಬೇರೆ ವಿಷಯದ ಬಗ್ಗೆಯಾಗಲಿ ಯಾವುದೇ ಗೊಂದಲ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.