ಬೆಂಗಳೂರು :ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಕರ್ಫ್ಯೂ ವಿಚಾರದಲ್ಲಿ, 18 ವರ್ಷ ತುಂಬಿದ ಎಲ್ಲರಿಗೂ ಲಸಿಕೆ ನೀಡಿಕೆ ಸಂಬಂಧ ಮಹತ್ವದ ನಿರ್ಧಾರ ಹೊರಬೀಳುವ ಸಂಭವವಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ನೂತನ ಮಾರ್ಗಸೂಚಿ ಜಾರಿ ನಂತರದ ಬೆಳವಣಿಗೆಗಳ ಕುರಿತು ಚರ್ಚೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅವರವರ ಜಿಲ್ಲೆಯಲ್ಲಿನ ಸ್ಥಿತಿಗತಿ, ಜಿಲ್ಲಾಡಳಿತದ ಅಭಿಪ್ರಾಯ ಕುರಿತು ಸಿಎಂಗೆ ಮಾಹಿತಿ ನೀಡಲಿದ್ದಾರೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂನಿಂದ ಆಗಿರುವ ಸಕಾರಾತ್ಮಕ ಅಂಶಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ.
ಈಗಾಗಲೇ ರಾಜ್ಯದಲ್ಲಿ ಲಾಕ್ಡೌನ್ ಜಾರಿ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೂ ಸಂಪುಟ ಸಭೆಯಲ್ಲಿ ಅಂತ್ಯ ಹಾಡಲಾಗುತ್ತದೆ ಎನ್ನಲಾಗಿದೆ. ಲಾಕ್ಡೌನ್ ಬಗ್ಗೆ ಸರ್ಕಾರದ ನಿಲುವು ಮತ್ತು ಕರ್ಫ್ಯೂ ವಿಚಾರದಲ್ಲಿ ಸ್ಪಷ್ಟತೆ ಹೊರಬೀಳುವ ಸಾಧ್ಯತೆ ಇದೆ.
ಮೇ 1ರಿಂದ 18 ವರ್ಷ ತುಂಬಿದ ಎಲ್ಲರಿಗೂ ಕೊರೊನಾ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ಯಾವೆಲ್ಲಾ ಸಿದ್ಧತೆ ಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ.
ಈಗಾಗಲೇ ಕೆಲ ರಾಜ್ಯಗಳು ಎಲ್ಲರಿಗೂ ಉಚಿತ ಲಸಿಕೆ ಹಾಕುವ ಘೋಷಣೆ ಮಾಡಿದ್ದು, ರಾಜ್ಯದಲ್ಲಿಯೂ ಉಚಿತ ಲಸಿಕೆ ಘೋಷಣೆ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆಯೂ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡು ಘೋಷಣೆ ಮಾಡುವ ಸಾಧ್ಯತೆ ಇದೆ.
ಇನ್ನುಳಿದಂತೆ ಇತರೆ ಆಡಳಿತಾತ್ಮಕ ವಿಷಯಗಳ ಕುರಿತು ಕೆಲ ನಿರ್ಧಾರಗಳನ್ನು ಸಿಎಂ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸಭೆ ಕೈಗೊಳ್ಳಲಿದೆ.
ಕಳೆದ ವರ್ಷದ ಖರ್ಚು, ವೆಚ್ಚವನ್ನೇ ಸಂಪೂರ್ಣ ಪ್ರಮಾಣದಲ್ಲಿ ಸರಿದೂಗಿಸಲು ಸರಿದೂಗಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈಗ ಮತ್ತೊಂದು ಹೊರೆ ಮೈಮೇಲೆ ಎಳೆದುಕೊಳ್ಳುವ ಉಸಾಬರಿ ಬೇಡವೆಂಬ ಚಿಂತನೆ ಮುಖ್ಯಮಂತ್ರಿ ಹಾಗೂ ಸಂಪುಟದ ಕೆಲವು ಸದಸ್ಯರಲ್ಲಿದೆ. ಹೀಗಾಗಿ ಸಂಪುಟ ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಯಲಿದ್ದು, ಎಲ್ಲರ ಅಭಿಪ್ರಾಯ ಪಡೆದೇ ಮುಂದಿನ ಹೆಜ್ಜೆ ಇಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ) :ಕರ್ನಾಟಕ ರಾಜ್ಯ ಸೇವೆಗಳು (ಶಿಕ್ಷಕರ | ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2021ಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಅರ್ಧಕ್ಕೆ ನಿಂತಿರುವ ಶಿಕ್ಷಕರ ವರ್ಗಾವಣೆಯನ್ನು ಪೂರ್ಣಗೊಳಿಸಲು ಸುಗ್ರೀವಾಜ್ಞೆ ತರಲು ಸರ್ಕಾರ ಬಯಸಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಶಿಕ್ಷಣ ಇಲಾಖೆ ಸಲ್ಲಿಸಿದೆ. ಸುಗ್ರೀವಾಜ್ಞೆ ತರಲು ಸಂಪುಟ ಒಪ್ಪಿಗೆ ನೀಡಿದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರು ಮತ್ತು ಅವರ ಕುಟುಂಬದವರು ನಿಟ್ಟುಸಿರು ಬಿಡುತ್ತಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯವ ನಿರೀಕ್ಷೆ ಇದೆ.