ಬೆಂಗಳೂರು:ಒಕ್ಕಲಿಗ ಸಮುದಾಯದ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆ ಮಾಡಿದ್ದು, 500 ಕೋಟಿ ರೂ.ಗಳ ಅನುದಾನ ಪ್ರಕಟಿಸಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ 1,500 ಕೋಟಿ, ಮಕ್ಕಳ ಯೋಜನೆಗೆ 37,524 ಕೋಟಿ, ಎಸ್ಇಪಿ, ಟಿಎಸ್ಪಿಗೆ 26,005 ಕೋಟಿ ಹಾಗು ಶಾಲೆಗಳ ಅಭಿವೃದ್ಧಿಗೆ 100 ಕೋಟಿ ಘೋಷಣೆ ಮಾಡಿದ್ದಾರೆ.
ಕೇಂದ್ರೀಯ ವಿದ್ಯಾಲಯಗಳ ಮಾದರಿಯಲ್ಲಿ 276 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲಾಗಿದೆ. ಈ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ತಯಾರಿಸಲಾಗುತ್ತಿದೆ. 2020-21ನೇ ಸಾಲಿನಲ್ಲಿ ಆಯ್ದ 50 ಶಾಲೆಗಳಿಗೆ ತಲಾ ಎರಡು ಕೋಟಿ ರೂ. ಅನುದಾನ ನೀಡಲಾಗಿದೆ. 2021-22ನೇ ಸಾಲಿನಲ್ಲಿ ಹೆಚ್ಚುವರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು 100 ಕೋಟಿ ರೂ. ಗಳನ್ನು ನಿಗದಿಪಡಿಸಲಾಗಿದೆ ಎಂದು ಸಿಎಂ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ರಾಜ್ಯದ ಆಯ್ದ 100 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯದೊಡನೆ ವೃತ್ತಿ ತರಬೇತಿ ನೀಡಲಾಗುವುದು. ಶಾಲಾ-ಕಾಲೇಜುಗಳಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಶೌಚಾಲಯಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ಉನ್ನತೀಕರಿಸಲು ಹಾಗೂ ನೀರಿನ ಸಂಪರ್ಕ ಒದಗಿಸಲು ಮುಂದಿನ ಎರಡು ವರ್ಷಗಳಲ್ಲಿ 100 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಈ ಉದ್ದೇಶಕ್ಕಾಗಿ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 150 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪೀಠೋಪಕರಣ ಮತ್ತು ಕಲಿಕಾ ಸಾಮಗ್ರಿಗಳನ್ನು ಒದಗಿಸಲು 50 ಕೋಟಿ ನಿಗದಿಪಡಿಸಲಾಗಿದೆ.
ಸರ್ಕಾರಿ ಶಾಲೆಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರೌಢಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆಯ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಡಿಯಲ್ಲಿ ರಾಜ್ಯದಲ್ಲಿರುವ ಒಟ್ಟು 4687 ಪ್ರೌಢಶಾಲೆಗಳಿಗೆ ಈಗಾಗಲೇ ಲ್ಯಾಪ್‌ಟಾಪ್ ಮತ್ತು ಪ್ರೊಜೆಕ್ಟರ್‌ಗಳನ್ನು ನೀಡಲಾಗಿದೆ. 2351 ಸರ್ಕಾರಿ ಪ್ರೌಢಶಾಲೆಗಳಲ್ಲಿ ತಲಾ ಎಂಟು ಲಕ್ಷ ರೂ.ಗಳ ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ.
ಓದು ಕರ್ನಾಟಕ' ಕಾರ್ಯಕ್ರಮಗಳಡಿ ಶಿಕ್ಷಕರ ತರಬೇತಿ: ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಜಾರಿಯಲ್ಲಿರುವ 'ಗುರು ಚೇತನ' ಮತ್ತು 'ಓದು ಕರ್ನಾಟಕ' ಕಾರ್ಯಕ್ರಮಗಳಡಿ ಶಿಕ್ಷಕರ ತರಬೇತಿ, ಆಂಗ್ಲಮಾಧ್ಯಮ ಶಿಕ್ಷಕರಿಗೆ ಆಂಗ್ಲ ಭಾಷಾ ತರಬೇತಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (IISc) ಯಿಂದ ಗಣಿತ, ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಲು 2021-22ನೇ ಸಾಲಿನಲ್ಲಿ ಐದು ಕೋಟಿ ರೂ. ಅನುದಾನ ಒದಗಿಸಲಾಗಿದೆ.
ರಾಜ್ಯದ ಎಂಟು ಜ್ಞಾನಪೀಠ ಪುರಸ್ಕೃತರು ಅಭ್ಯಸಿಸಿದ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕಾರ್ಯಕ್ರಮ ರೂಪಿಸಲಾಗುವುದು. ಆಧುನಿಕ ತಂತ್ರಜ್ಞಾನದೊಂದಿಗೆ ಉನ್ನತ ಶಿಕ್ಷಣದಲ್ಲಿ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಹಿಂದಿನ ವರ್ಷಗಳಲ್ಲಿ ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳನ್ನು ವಿತರಣೆ ಮಾಡಲಾಗಿದೆ. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 87 ಸರ್ಕಾರಿ ಪಾಲಿಟೆಕ್ನಿಕ್, 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಡಿಜಿಟಲ್ ಕಲಿಕೆಗೆ ಅನುವಾಗುವಂತೆ ತರಗತಿ ಕೊಠಡಿಗಳನ್ನು ಹಂತ ಹಂತವಾಗಿ ಸ್ಮಾರ್ಟ್ ಕ್ಲಾಸ್‌ರೂಮ್‌ಗಳಾಗಿ ಪರಿವರ್ತಿಸಲು 50 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗುವುದು.
'ಸಾಮರ್ಥ್ಯ-ಸಾರಥ್ಯ':ಕೇಂದ್ರ ಮತ್ತು ರಾಜ್ಯ ಆಡಳಿತ ಸೇವೆಗಳು, ಬ್ಯಾಂಕಿಂಗ್, ರೈಲ್ವೆ ಇತ್ಯಾದಿ ಉದ್ಯೋಗಗಳಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರ ಸೇರ್ಪಡೆಯನ್ನು ಉತ್ತೇಜಿಸಲು 'ಸಾಮರ್ಥ್ಯ-ಸಾರಥ್ಯ' ಎಂಬ ಕಾರ್ಯಕ್ರಮದಡಿ 5 ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ತರಬೇತಿ ನೀಡುವುದು. ಈ ಕಾರ್ಯಕ್ರಮಕ್ಕಾಗಿ 2021-22 ರ ಆರ್ಥಿಕ ವರ್ಷದಲ್ಲಿ ಐದು ಕೋಟಿ ಒದಗಿಸಿದೆ.
ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೋವಿಡ್-19ರ ಅವಧಿಯಲ್ಲಿ ಸೃಜಿಸಿದ ಮೌಲ್ಯಯುತವಾದ ವೈದ್ಯಕೀಯ ಸೌಕರ್ಯಗಳನ್ನು ವ್ಯರ್ಥವಾಗದಂತೆ ಸದ್ಬಳಕೆ ಮಾಡಲು ರಾಜ್ಯದ 19 ಜಿಲ್ಲಾಸ್ಪತ್ರೆಗಳಲ್ಲಿ 25 ಹಾಸಿಗೆ ಸಾಮರ್ಥ್ಯವುಳ್ಳ ಹಾಗೂ 100 ತಾಲೂಕು ಆಸ್ಪತ್ರೆಗಳಲ್ಲಿ ಆರು ಹಾಸಿಗೆ ಸಾಮರ್ಥ್ಯವುಳ್ಳ ತೀವ್ರ ನಿಗಾ ಘಟಕಗಳನ್ನು 60 ಕೋಟಿ ರೂ.ಗಳ ವೆಚ್ಚದಲ್ಲಿ ಕಾರ್ಯಗತಗೊಳಿಸಲಾಗುವುದು.
ಓದಿ:ಧಾರವಾಡ-ಕಿತ್ತೂರು-ಬೆಳಗಾವಿಗೆ ಹೊಸ ರೈಲು ಮಾರ್ಗಕ್ಕೆ ಅಸ್ತು: ನನಸಾದ ಸುರೇಶ್ ಅಂಗಡಿ ಕನಸು
ಒಂದು ಕೋಟಿ ರೂ. ವೆಚ್ಚದಲ್ಲಿ ಆ್ಯಂಟಿ-ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಘಟಕ ಪ್ರಾರಂಭ. ನವಜಾತ ಶಿಶುಗಳಲ್ಲಿ ಅನುವಂಶೀಯ ಮೆಟಾಬಾಲಿಕ್ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಲು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಪ್ರಯೋಗಾಲಯಗಳನ್ನು ಒಟ್ಟು 10 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪನೆ. ರಾಜ್ಯದ ನಾಲ್ಕು ವಿಭಾಗಗಳಲ್ಲಿ 'ತಾಯಂದಿರ ಎದೆಹಾಲಿನ ಬ್ಯಾಂಕ್ ಗಳನ್ನು ಒಟ್ಟು 2.5 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪನೆ. ತಾಯಿ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಗರ್ಭಾವಸ್ಥೆಯಲ್ಲಿ ಉತ್ತಮ ಗುಣಮಟ್ಟದ ಆರೈಕೆ ನೀಡಲು ಹಾಗೂ ತೊಡಕುಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚಲು ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡುವುದನ್ನು ಉತ್ತೇಜಿಸಲು 10 ಕೋಟಿ ರೂ.ಗಳ ವೆಚ್ಚದಲ್ಲಿ 'ಚಿಗುರು' ಕಾರ್ಯಕ್ರಮವನ್ನು ಆರಂಭ.
ಭಾರತೀಯ ವೈದ್ಯ ಪದ್ಧತಿಯನ್ನು ಉತ್ತೇಜಿಸಲು ಹಾಗೂ ಸಂಶೋಧನೆಯನ್ನು ಪ್ರೋತ್ಸಾಹಿಸಲು ಶಿವಮೊಗ್ಗ ಜಿಲ್ಲೆಯಲ್ಲಿರುವ ಆಯುರ್ವೇದ ಕಾಲೇಜನ್ನು ಆಯುಷ್ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಅಪೌಷ್ಟಿಕತೆಯಿಂದ ತಾಯಿ ಹಾಗೂ ಮಗುವನ್ನು ರಕ್ಷಿಸಲು ಭಾರತೀಯ ವೈದ್ಯ ಪದ್ಧತಿಗನುಸಾರವಾಗಿ 'ಪೋಷಣೆ ಮತ್ತು ಜೀವನೋಪಾಯ' ಕಾರ್ಯಕ್ರಮವನ್ನು 5 ಕೋಟಿ ರೂ.ಗಳ ವೆಚ್ಚದಲ್ಲಿ ಆಯುಷ್ ಇಲಾಖೆಯ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭ.
ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಟ್ಟು ಐದು ಕೋಟಿ ರೂ.ಗಳ ವೆಚ್ಚದಲ್ಲಿ ತುರ್ತು ವಿಭಾಗಗಳ ಪ್ರಾರಂಭ. ಕ್ಯಾನ್ಸರ್ ರೋಗಿಗಳಿಗೆ ಸಮೀಪದಲ್ಲಿಯೇ ಸಕಾಲಿಕ, ಮಿತವ್ಯಯದಾಯಕ ಚಿಕಿತ್ಸೆಯನ್ನು ಒದಗಿಸಲು ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಒಟ್ಟು 100 ಕೋಟಿ ರೂ.ಗಳ ವೆಚ್ಚದಲ್ಲಿ ಕಿದ್ವಾಯಿ ಸಂಸ್ಥೆ ಮಾದರಿಯ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳ ಪ್ರಾರಂಭ. ಮಹಿಳೆಯರಲ್ಲಿ ಕ್ಯಾನ್ಸರ್ ರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೂರು ಹೊಸ ಸುಸಜ್ಜಿತ ಸಂಚಾರಿ ಪ್ರಯೋಗಾಲಯಗಳು 11 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾರಂಭ. ದಾವಣಗೆರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರವನ್ನು 20 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾರಂಭ. ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗವನ್ನು ಪ್ರಾರಂಭಿಸುವ ಉದ್ದೇಶ, ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಪ್ರಾರಂಭ.
ರಾಜ್ಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವೀಧರರ ಕೊರತೆಯನ್ನು ನೀಗಿಸಲು ಸರ್ಕಾರವು ಹಾಸನ ಮತ್ತು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನಿಂದ 100 ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ. ಅಪಘಾತಗಳ ಸಂದರ್ಭದಲ್ಲಿ ಜೀವ ರಕ್ಷಣೆಗೆ ತುರ್ತು ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಟ್ರಾಮಾ ಕೇರ್ ಕೇಂದ್ರವನ್ನು ಲೋಕಾರ್ಪಣೆ ಮಾಡಲಾಗುತ್ತದೆ. ರಾಜ್ಯದ ಅತ್ಯಂತ ಹಳೆಯ ಮಾನಸಿಕ ಆರೋಗ್ಯ ಸಂಸ್ಥೆಯಾಗಿರುವ ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯನ್ನು ಮಾನಸಿಕ ನರರೋಗಿಗಳ ಸುಸಜ್ಜಿತ ಚಿಕಿತ್ಸಾ ಸಂಸ್ಥೆಯನ್ನಾಗಿ 75 ಕೋಟಿ ರೂ.ಗಳ ವೆಚ್ಚದಲ್ಲಿ ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ ಒದಗಿಸುವ ಭರವಸೆ ನೀಡಿದೆ.
ಬುದ್ಧಿಮಾಂದ್ಯರ ಆರೈಕೆ ಮಾಡಲು ಅನುವಾಗುವಂತೆ ಶೇ.75 ಕ್ಕಿಂತ ಹೆಚ್ಚಿನ ಮನೋವೈಕಲ್ಯತೆ ಹೊಂದಿದವರಿಗೆ ಪ್ರಸ್ತುತ ನೀಡುತ್ತಿರುವ ಮಾಸಾಶನವನ್ನು 1400 ರೂ.ಗಳಿಂದ 2000 ರೂ.ಗಳಿಗೆ ಹೆಚ್ಚಿಸಲಾಗುವುದು. ರಾಜ್ಯದಲ್ಲಿನ ವಿಶೇಷ ಶಾಲೆಗಳಲ್ಲಿ ಒಂದರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ನೆರವಾಗಲು ಸರ್ಕಾರದ ಬೈಲ್ ಮುದ್ರಣಾಲಯದಲ್ಲಿ 'ಸುಶ್ರಾವ್ಯ' ಡಿಜಿಟಲ್ ಪುಸ್ತಕಗಳ ಬ್ಯಾಂಕನ್ನು ಸ್ಥಾಪಿಸಿ, ವಿಶೇಷ ಶಾಲೆಗಳಿಗೆ ಡಿಜಿಟಲ್ ಪುಸ್ತಕಗಳನ್ನು ಸರಬರಾಜು ಮಾಡಲಾಗುವುದು. ಮಕ್ಕಳ ಉದ್ದೇಶಿತ ಯೋಜನೆಗಳಿಗೆ 2021-22ನೇ ಸಾಲಿನಲ್ಲಿ ಒಟ್ಟಾರೆಯಾಗಿ 37,527 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಓದಿ:ಬಿಎಸ್ವೈ ಬಜೆಟ್ನಲ್ಲಿ ಕೃಷಿಗೆ ಬಂಪರ್... ವಿವಿಧ ಯೋಜನೆಗಳಿಗೆ ಕೋಟಿ ಕೋಟಿ ರೂ. ಘೋಷಣೆ
ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ (ಎಸ್ಸಿಎಸ್ಪಿ/ಟಿಎಸ್ಪಿ) ಗಳಡಿ ಒಟ್ಟಾರೆ 26,005 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಬದ್ಧ ವೆಚ್ಚಗಳಾದ ವೇತನ, ಗೌರವಧನ, ಅಸಲು ಮತ್ತು ಬಡ್ಡಿ ಪಾವತಿ, ಪಿಂಚಣಿ ಮುಂತಾದವುಗಳು 2020-21ನೇ ಸಾಲಿನ 1,29,455 ಕೋಟಿ ರೂ.ಗಳಿಂದ 2021-22ನೇ ಸಾಲಿನಲ್ಲಿ 1,42,855 ಕೋಟಿ ರೂ.ಗಳಿಗೆ ಹೆಚ್ಚಾಗಿರುವುದರಿಂದ ಒಟ್ಟಾರೆ ಎಸ್ಸಿಎಸ್ಪಿ/ಟಿಎಸ್ಪಿ ರಡಿ ಹಂಚಿಕೆ ಮಾಡಬೇಕಾದಂತಹ ಆಯವ್ಯಯವು ಇಳಿಕೆಯಾಗಿರುತ್ತದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಕೇಂದ್ರಗಳಲ್ಲಿ 50 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳನ್ನು ಒಟ್ಟು 50 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು. ವಸತಿ ನಿಲಯಗಳಿಂದ ಸುಮಾರು 5000 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ನಾಲ್ಕು ವಿಭಾಗಗಳಲ್ಲಿ ತಲಾ ಒಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಅದ್ವಿತೀಯ ಕ್ರೀಡಾ ಶಾಲೆಗಳೆಂದು (Sports School of Excellence) ಉನ್ನತೀಕರಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯದೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಈ ಉದ್ದೇಶಕ್ಕಾಗಿ ಒಟ್ಟು 5 ಕೋಟಿ ರೂ.ಗಳನ್ನು ಒದಗಿಸುವ ಆಶ್ವಾಸನೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ 'ಕೊಲ್ಲಾಪುರಿ ಪಾದರಕ್ಷೆಗಳ ಕ್ಲಸ್ಟರ್' ಮತ್ತು ಚಿತ್ರದುರ್ಗ ನಗರದಲ್ಲಿ ಕೇಂದ್ರ ಪಾದರಕ್ಷಾ ತರಬೇತಿ ಸಂಸ್ಥೆಯ ವಿಸ್ತರಣಾ ಕೇಂದ್ರ ಪ್ರಾರಂಭ. ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳನ್ನು 'ವಾಲ್ಮೀಕಿ ಆಶ್ರಮ ಶಾಲೆ' ಎಂದು ಮರು ನಾಮಕರಣ. ಸಂವಿಧಾನ ಶಿಲ್ಪಿ, ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹಾಸನ ನಗರದ ಎ.ಕೆ. ಬೋರ್ಡಿಂಗ್ ಹೋಮ್‌ಗೆ ಭೇಟಿ ನೀಡಿದ್ದರು. ಈ ಐತಿಹಾಸಿಕ ಸ್ಥಳದಲ್ಲಿ ಸ್ಮಾರಕ ಭವನವನ್ನು ನಿರ್ಮಿಸಲು ಒಂದು ಕೋಟಿ ರೂ. ಅನುದಾನ.
ವಿವಿಧ ನಿಗಮಗಳಿಗೆ 500 ಕೋಟಿ: ರಾಜ್ಯದಲ್ಲಿನ ಬಡ, ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಅಭ್ಯುದಯಕ್ಕೆ ನಮ್ಮ ಸರ್ಕಾರ ಒತ್ತು ನೀಡಿದೆ, ಈ ಸಮುದಾಯಗಳ ವಿದ್ಯಾರ್ಥಿಗಳು, ಯುವಜನರ ಶಿಕ್ಷಣ ಹಾಗೂ ಸ್ವಾವಲಂಬನೆಗೆ ಬೆಂಬಲ ನೀಡಲು ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಮರಾಠಾ ಅಭಿವೃದ್ಧಿ ನಿಗಮ, ಕಾಡುಗೊಲ್ಲರ ಅಭಿವೃದ್ಧಿ ನಿಗಮ, ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಹಾಗೂ ಸವಿತಾ ಸಮಾಜ ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆ 500 ಕೋಟಿ ರೂ.ಗಳ ಅನುದಾನವನ್ನು ಪ್ರಸಕ್ತ ಸಾಲಿನಲ್ಲಿ ಒದಗಿಸಲಾಗಿದೆ.
ಒಕ್ಕಲಿಗ ನಿಗಮ ಸ್ಥಾಪನೆ: ವೀರಶೈವ ಲಿಂಗಾಯತ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಒಂದು ಹೊಸ ನಿಗಮವನ್ನು ಸ್ಥಾಪಿಸಿ ಇದಕ್ಕೆ 500 ಕೋಟಿ ರೂ.ಗಳ ಅನುದಾನ ನಿಗದಿಪಡಿಸಿದ್ದು, ಇದರಲ್ಲಿ ಈಗಾಗಲೇ 100 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಹೊಸ ನಿಗಮವನ್ನು ಸ್ಥಾಪಿಸಲಾಗುವುದು. ನಿಗಮದ ಚಟುವಟಿಕೆಗಳಿಗೆ 500 ಕೋಟಿ ರೂ. ವೆಚ್ಚ ಮಾಡಲು ಯೋಜಿಸಲಾಗಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ 50 ಕೋಟಿ ರೂ.ಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ಹಿಂದುಳಿದ ಕಲ್ಯಾಣ ಇಲಾಖೆಗೆ ಸೇರಿದ ಖಾಲಿ ನಿವೇಶನಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಡಿಯಲ್ಲಿ 150 ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಸ್ವಂತ ಕಟ್ಟಡ ಹೊಂದಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿನ ಸಂಖ್ಯಾ ಬಲವನ್ನು ಶೇ. 5ರಷ್ಟು ಹೆಚ್ಚಿಸಲಾಗುವುದು. ಇದರಿಂದ 5000 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಅವಕಾಶ ಕಲ್ಪಿಸಿದಂತಾಗುತ್ತದೆ. ಈ ಉದ್ದೇಶಕ್ಕಾಗಿ 2021-22ನೇ ಸಾಲಿನ ಆಯವ್ಯಯದಲ್ಲಿ 10 ಕೋಟಿ ರೂ.ಗಳನ್ನು ಒದಗಿಸಲಾಗುವುದು.ಗಂಗಾ ಕಲ್ಯಾಣ ಯೋಜನೆಯನ್ನು ಪಾರದರ್ಶಕವಾಗಿ ಮತ್ತು ನಿಗದಿತ ಅವಧಿಯೊಳಗೆ ರೈತ ಫಲಾನುಭವಿಗಳಿಗೆ ತಲುಪಿಸಲು 'ಅನುಷ್ಠಾನದ ವಿವೇಚನೆ ಫಲಾನುಭವಿಯ ಕೈಗೆ' ಎಂಬ ನೂತನ ವಿಧಾನವನ್ನು ಜಾರಿಗೆ ತರುವ ಭರವಸೆ ನೀಡಲಾಗಿದೆ.
ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಅಲ್ಪಸಂಖ್ಯಾತರ ಏಳಿಗೆಗಾಗಿ 1500 ಕೋಟಿ ರೂ. ಮೀಸಲಿಡಲಾಗಿದೆ. ರಾಜ್ಯದಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಚರ್ಚ್‌ಗಳ ನವೀಕರಣ/ದುರಸ್ತಿ, ಸಮುದಾಯ ಭವನ ಕಟ್ಟಡ ನಿರ್ಮಾಣ, ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೆರವು ಮುಂತಾದ ಕಾರ್ಯಕ್ರಮಗಳನ್ನು 200 ಕೋಟಿ ರೂ.ಗಳ ವೆಚ್ಚದಲ್ಲಿ ಮುಂದುವರಿಸಲಾಗುವುದು. 2020-21ನೇ ಸಾಲಿನಲ್ಲಿ 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಉರ್ದು ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮವನ್ನು ಸಹ ಪ್ರಾರಂಭಿಸಲು ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಮಾದರಿ ಶಾಲೆ/ಕಾಲೇಜುಗಳಲ್ಲಿ 'ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ' ಅನುಷ್ಠಾನಗೊಳಿಸಿ, ಸದರಿ ಶಾಲಾ/ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಎಲ್ಲಾ ವಿಷಯಗಳಲ್ಲಿ ಬೋಧನಾ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಭರವಸೆ ನೀಡಲಾಗಿದೆ.
ಓದಿ:ಬಿಎಸ್ವೈ ಬಜೆಟ್-2021-22: ಜನಸ್ನೇಹಿ ಆಡಳಿತ ನೀಡಲು ಸಿಎಂ ಕೈಗೊಂಡ ಮಹತ್ವದ ಯೋಜನೆಗಳಿವು
ಜೈನಕಾಶಿ ಎಂದೇ ಪ್ರಸಿದ್ಧವಾದ ಹಾಸನದ ಶ್ರವಣಬೆಳಗೊಳ ಮತ್ತಿತರೆ ಜೈನ ಪುಣ್ಯ ಕ್ಷೇತ್ರಗಳಲ್ಲಿ ವಸತಿ ಗೃಹಗಳು, ಪಾದಚಾರಿ ರಸ್ತೆಗಳು ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು 50 ಕೋಟಿ ರೂ. ವೆಚ್ಚದಲ್ಲಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. 2021-22ನೇ ಸಾಲಿನಲ್ಲಿ 20 ಕೋಟಿ ರೂ.ಗಳನ್ನು ಈ ಉದ್ದೇಶಕ್ಕಾಗಿ ಒದಗಿಸಲಾಗುವುದು. ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಹಲವು ವರ್ಷಗಳಿಂದ ಅನುಮೋದನೆಗೊಂಡು, ಪ್ರಾರಂಭವಾಗದೇ ಇರುವಂತಹ ಮನೆಗಳನ್ನು ಪ್ರಾರಂಭಿಸಿ ಪೂರ್ಣಗೊಳಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಗತಿಯಲ್ಲಿರುವ 9.74 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು 10,194 ಕೋಟಿ ರೂ.ಗಳನ್ನು ಮುಂದಿನ ಮೂರು ಆರ್ಥಿಕ ವರ್ಷಗಳಲ್ಲಿ ಒದಗಿಸಲು ಅನುಮೋದನೆ ನೀಡಿದೆ.
ಕಾರ್ಮಿಕ ಸ್ನೇಹಿ ಹಾಗೂ ಉದ್ಯಮ ಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 21 ಕಾರ್ಮಿಕ ಕಾನೂನುಗಳನ್ನು ಕ್ರೂಢೀಕರಿಸಿ ನಾಲ್ಕು ಸಂಹಿತೆಗಳನ್ನು ರೂಪಿಸಿದೆ. ರಾಜ್ಯ ಸರ್ಕಾರವು ಇದಕ್ಕೆ ನಿಯಮಾವಳಿಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿದೆ. 160, ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಸಂರಕ್ಷಣೆಗಾಗಿ ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ 100 ಕಿತ್ತೂರು ರಾಣಿ ಚೆನ್ನಮ್ಮ ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಕಟ್ಟಡ ಕಾರ್ಮಿಕರು ಹಾಗು ಅವರ ಅವಲಂಬಿತರ ವೈದ್ಯಕೀಯ ತಪಾಸಣೆ ಹಾಗು ಚಿಕಿತ್ಸೆಗಾಗಿ ಆಯ್ದ ಕಾರ್ಯನಿರ್ವಹಣಾ ಸ್ಥಳಗಳಲ್ಲಿ 25 ಸಂಚಾರಿ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಆರಂಭಿಸಲಾಗುವುದು. ನಿರ್ಮಾಣ ಕಾರ್ಮಿಕರು ವಸತಿ ಸಮಸ್ಯೆಯನ್ನು ಎದುರಿಸುತ್ತಿರುವುದನ್ನು ಮನಗಂಡು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಲ್ಕು ಹಾಗೂ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಕಲಬುರಗಿ, ಬಳ್ಳಾರಿ, ಹಾಸನ, ದಾವಣಗೆರೆ, ಗದಗ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ತಲಾ ಒಂದರಂತೆ ಸುಸಜ್ಜಿತವಾದ ತಾತ್ಕಾಲಿಕ ವಸತಿ ತಾತ್ಕಾಲಿಕ ವಸತಿ ಗೃಹ ಸೌಲಭ್ಯವನ್ನು ನಿರ್ಮಾಣ ಮಾಡಲಿದೆ.
ಓದಿ:ರಾಜ್ಯದಲ್ಲಿ ಹೊಸದಾಗಿ 52 ಬಸ್ ನಿಲ್ದಾಣ, 16 ಡಿಪೊ ನಿರ್ಮಾಣ
ಜಾಗತಿಕ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೈಗಾರಿಕೆಗಳ ಅಗತ್ಯತೆಗೆ ತಕ್ಕಂತೆ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸಲು, ಟಾಟಾ ಟೆಕ್ನಾಲಜೀಸ್ ಲಿಮಿಟಿಡ್ ರವರ ಸಹಯೋಗದೊಂದಿಗೆ ಹಬ್ ಮತ್ತು ಸ್ನೇಕ್ ಮಾದರಿಯಲ್ಲಿ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು 4636 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಉನ್ನತೀಕರಿಸಲು ಕ್ರಮವಹಿಸಲಾಗಿದೆ. ಈ ಯೋಜನೆಯ ಶೇ. 88ರಷ್ಟು ಅಂದರೆ 4080 ಕೋಟಿ ರೂ.ಗಳ ವೆಚ್ಚವನ್ನು ಟಾಟಾ ಟೆಕ್ನಾಲಜೀಸ್ ಲಿಮಿಟಿಡ್ ರವರು ಭರಿಸಲಿದ್ದು, ರಾಜ್ಯ ಸರ್ಕಾರವು ಶೇ. 12ರಷ್ಟು ಅಂದರೆ, 657 ಕೋಟಿ ರೂ.ಗಳನ್ನು ಭರಿಸಲಿದೆ.