ಬೆಂಗಳೂರು:ವಯೋಸಹಜ ಸಮಸ್ಯೆಯಿಂದ ಹಿರಿಯ ಸಾಹಿತಿ, ಸಮಾಜ ಸೇವಕಿ ಎ. ಪಂಕಜ ನಿಧನರಾಗಿದ್ದಾರೆ.
ಕಳೆದ ಆರು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿದ್ದ ಪಂಕಜ ಅವರು, ಒಂದು ವಾರದ ಹಿಂದೆ ಸ್ಟ್ರೋಕ್ ಸಂಭವಿಸಿ ಕಳೆದ ಡಿ.11ರಂದು ಬೆಂಗಳೂರಿನಲ್ಲಿ ಮೃತರಾದರು ಎಂದು ಅವರ ಹಿರಿಯ ಮಗ ಜಯಸಿಂಹ ತಿಳಿಸಿದ್ದಾರೆ.
ಪಂಕಜ ಅವರು 1939ರ ಏಪ್ರಿಲ್ 20ರಂದು ತುಮಕೂರು ಜಿಲ್ಲೆಯ ಪಾವಗಡದಲ್ಲಿ ಜನಿಸಿದ್ದರು. ಹಿಂದಿ ಪರೀಕ್ಷೆಯಲ್ಲಿ ವಿದ್ವಾನ್ ಪದವಿ ಪಡೆದ ನಂತರ ಹಿಂದಿ ಭಾಷೆಯಲ್ಲೇ ಬರೆಯತೊಡಗಿದರು. ಇವರ ಹಲವಾರು ಹಿಂದಿ ನಾಟಕಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ನಂತರ ಇಂಗ್ಲಿಷ್, ಹಿಂದಿ, ತೆಲುಗು ಭಾಷೆಯಿಂದ ಹಲವು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದರು.
ಇವರ ಮೊದಲ ಕಥೆ ಪ್ರಕಟವಾದುದು ‘ತಾಯಿನಾಡು’ ಪತ್ರಿಕೆಯಲ್ಲಿ. ನಂತರ ‘ಸೋದರಿ’, ‘ವಿಶ್ವಬಂಧು’ ಮುಂತಾದ ಪತ್ರಿಕೆಗಳಿಗೂ ಬರೆಯ ತೊಡಗಿದರು. ಪಂಕಜ ಅವರು 50ಕ್ಕೂ ಹೆಚ್ಚು ಸಾಮಾಜಿಕ, ಪೌರಾಣಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಬರೆದಿದ್ದಾರೆ. ಬೆಂಗಳೂರು ಎಜುಕೇಷನ್ ಸೊಸೈಟಿ, ಸೋಫಿಯಾ ಹೈಸ್ಕೂಲ್ನಲ್ಲಿ ಕೆಲಕಾಲ ಉಪಾಧ್ಯಾಯಿನಿಯಾಗಿ, ನಂತರ ಲ್ಯಾಂಡ್ ಮಾರ್ಟ್‌ಗೇಜ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು.