ಕರ್ನಾಟಕ

karnataka

ETV Bharat / state

'ಅವ್ವ' ಕಥಾ ಸಂಕಲನ ಹೊರ ತರುತ್ತಿದ್ದಾರೆ ಮುಖ್ಯಮಂತ್ರಿ ಬೊಮ್ಮಾಯಿ - 'Awwa' compilation of Chief Ministers

ಸಪ್ನ ಬುಕ್​​ಹೌಸ್ ವತಿಯಿಂದ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡದ ಹೆಸರಾಂತ ಲೇಖಕರ 66 ಕನ್ನಡ ಪುಸ್ತಕಗಳನ್ನು ಸಿಎಂ ಲೋಕಾರ್ಪಣೆ ಮಾಡಿದರು.

'ಅವ್ವ' ಕಥಾ ಸಂಕಲನ ಹೊರ ತರುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ
ಸಿಎಂ ಬೊಮ್ಮಾಯಿ

By

Published : Nov 27, 2021, 11:28 PM IST

ಬೆಂಗಳೂರು:ಸಾಹಿತ್ಯ ಮತ್ತು ಸಂಸ್ಕೃತಿಯ ನಡುವಿನ ಕೊಂಡಿಯಾಗಿ ಕನ್ನಡ ನಾಡಿಗೆ ಒಂದು ಹೊಸ ಸಾಂಸ್ಕೃತಿಕ ದಿಕ್ಸೂಚಿಯನ್ನು ನೀಡಬೇಕಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಪ್ನ ಬುಕ್​​ಹೌಸ್ ವತಿಯಿಂದ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡದ ಹೆಸರಾಂತ ಲೇಖಕರ 66 ಕನ್ನಡ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಸಿಎಂ ಮಾತನಾಡಿದರು.

ಸಾಹಿತಿಗಳಿಂದ ಸಂಸ್ಕೃತಿಯ ಕುರಿತ ಚಿಂತನೆ ಸಾಧ್ಯ:

ಕನ್ನಡ ನಾಡು ಕೇವಲ ಆರ್ಥಿಕವಾಗಿ ಬೆಳೆದರೆ ಸಾಲದು, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ,ಸಾಹಿತ್ಯಕವಾಗಿಯೂ ಬೆಳೆಯಬೇಕು. ನಮ್ಮ ಸಂಸ್ಕೃತಿ ನಾವೇನಾಗಿದ್ದೇವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ನಾವು ಏನಾಗಬೇಕಿತ್ತು ಹಾಗೂ ಏನಾಗಿದ್ದೇವೆ ಎಂಬ ಚಿಂತನೆ ಮಾಡುವ ಸಂಸ್ಕೃತಿ ಇಂದಿನ ಆಧುನಿಕ ಯುಗದಲ್ಲಿ ಮಾಡಬೇಕಿದೆ. ಈ ಚಿಂತನೆಯನ್ನು ಸಾಹಿತಿಗಳು ಮಾಡಲು ಸಾಧ್ಯ. ಸಮಾಜದಲ್ಲಿ ಸಾಹಿತಿ ಹಾಗೂ ಸಾಹಿತ್ಯದ ಬಗ್ಗೆ ಅಪಾರ ಗೌರವವಿದೆ. ಕನ್ನಡ ಸಂಸ್ಕೃತಿಯ ಬೆಳವಣಿಗೆ ಸಾಹಿತಿಗಳ ಮುಖಾಂತರವಾದಾಗ ಅವರ ಬಗೆಗಿನ ಗೌರವದೊಂದಿಗೆ ಪ್ರೀತಿ ವಿಶ್ವಾಸವೂ ಮೂಡುತ್ತದೆ ಎಂದು ನುಡಿದರು.

ಸಾಹಿತ್ಯಕ್ಕೆ ಭಾಷೆ , ಜಾತಿ ಧರ್ಮದ ಹಂಗಿಲ್ಲ:

ಮನುಜಕುಲ ತನ್ನ ಬುದ್ಧಿಶಕ್ತಿ ಹಾಗೂ ವಾಕ್ ಶಕ್ತಿಯಿಂದ ಎಂತಹ ವಿಷಮ ಪರಿಸ್ಥಿತಿಯಲ್ಲೂ ಬದುಕುತ್ತಾನೆ. ತನ್ನ ಚಿಂತನಾಶಕ್ತಿಯಿಂದ ಒಗ್ಗಿಕೊಳ್ಳುವಿಕೆಯ ಗುಣ ಮನುಷ್ಯನಿಗಿದೆ. ಈ ಚಿಂತನೆ ಶಬ್ಧರೂಪ ಪಡೆದು ಅಕ್ಷರ, ಬರಹ, ಸಾಹಿತ್ಯ ಮೂಡಿತು. ಹೀಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನ ನಿರ್ಮಿಸಲು ಮನುಷ್ಯನಿಂದ ಸಾಧ್ಯವಾಯಿತು. ಸಾಹಿತ್ಯಕ್ಕೆ ಭಾಷೆ, ಧರ್ಮ ಮತ್ತು ಜಾತಿಯ ಹಂಗಿಲ್ಲ. ಶುಭ್ರ, ಸತ್ಯ ಚಿಂತನೆಯಿಂದ ಮೂಡಿದ ಸಾಹಿತ್ಯ ನಮ್ಮಲ್ಲಿ ಬೆರೆಗು ಮತ್ತು ಚೈತನ್ಯ ಮೂಡಿಸುತ್ತದೆ. ಸತ್ಯ ಶೋಧನೆ, ಸತ್ಯ ಪರಿಕಲ್ಪನೆ ಶ್ರೇಷ್ಠ ಸಾಹಿತ್ಯಕ್ಕೆ ಸಾಧ್ಯ. ಕನ್ನಡದಲ್ಲಿ ಇಂತಹ ಶ್ರೇಷ್ಠ ಸಾಹಿತಿಗಳ ಸರಮಾಲೆಯೇ ಇದೆ. ಈಗಿನ ಜಾಗತೀಕರಣ, ಖಾಸಗೀಕರಣ ಯುಗದಲ್ಲಿ ಅಂತಃಕರಣ ಕಾಣೆಯಾಗಿದ್ದು, ಲಾಭ ನಷ್ಟದ ಲೆಕ್ಕಾಚಾರ ಮಾತ್ರ ಉಳಿದಿದೆ. ಆರ್ಥಿಕತೆಯಲ್ಲಿ ಪಾಪಪುಣ್ಯದ ಭಾವ ಮೂಡಿದರೆ ಸತ್ಯ ಮಾರ್ಗದಲ್ಲಿ ನಡೆಯಲು ಅನುಕೂಲವಾಗುತ್ತದೆ. ಬದುಕಿನಲ್ಲಿಯೂ ಲಾಭ ನಷ್ಟದ ಭಾವ ಮೂಡಿದರೆ ಆಧ್ಯಾತ್ಮದತ್ತ ನಡೆಯಲು ಸಹಕಾರಿಯಾಗುತ್ತದೆ. ಈ ಚಿಂತನೆಗಳಿಂದ ಕೂಡಿದ ಸಾಹಿತ್ಯ ದೊರಕಿದಲ್ಲಿ ನಮ್ಮಲ್ಲಿ ಮರೆಯಾಗುತ್ತಿರುವ ಅಂತ:ಕರಣವನ್ನೂ ಪುನ: ಸ್ಥಾಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಸಪ್ನ ಬುಕ್​ ಹೌಸ್​ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದೆ:

ಸಪ್ನ ಬುಕ್ ಹೌಸ್​ನಲ್ಲಿ ಶಾಲಾ ಪುಸ್ತಕ, ಸಾಹಿತ್ಯಿಕ ಪುಸ್ತಕಗಳು, ಜನಸಾಮಾನ್ಯರ ಕೈಗೆಟಕುವ ಬೆಲೆಯಲ್ಲಿ ದೊರಕುವ ಜೊತೆಗೆ ಎಲ್ಲಾ ವಿಷಯಗಳ ಪುಸ್ತಕ ಒಂದು ಸೂರಿನಡಿ ಲಭ್ಯವಿದೆ. ಹಲವಾರು ಗಂಟೆಗಳನ್ನು ಸಪ್ನ ಬುಕ್ ಹೌಸ್​​​​ನಲ್ಲಿ ಕಳೆದಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಸಪ್ನ ಬುಕ್ ಹೌಸ್​ಗೆ ಕನ್ನಡದ ಮೇಲಿರುವ ಪ್ರೀತಿ ನಿಜಕ್ಕೂ ಆಶ್ಚರ್ಯ ಹಾಗೂ ಮೆಚ್ಚುಗೆ ಮೂಡಿಸುತ್ತದೆ. ನಿರಂತರವಾಗಿ ಕನ್ನಡವನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ಖಾಸಗಿ ವಲಯದಲ್ಲಿ ಕನ್ನಡ ಬೆಳವಣಿಗೆ ಕೊಡುಗೆಯನ್ನು ನೀಡುತ್ತಿರುವ ಶ್ರೇಷ್ಠವಾದ ಸಂಸ್ಥೆ .ಪ್ರಾಮಾಣಿಕ ಕರ್ತವ್ಯ ನಿಷ್ಠ, ಬದ್ಧತೆ ಇರುವಂತಹ ಒಂದು ಉದ್ಯಮ. ಹೆಚ್ಚಿಗೆ ಲಾಭ ವಿಲ್ಲದದ್ದರೂ ಗುಡ್​​ವಿಲ್ ಅನ್ನು ಸಂಪಾದಿಸಿದ್ದಾರೆ. ಇವರು ಸಾಹಿತ್ಯ , ಪುಸ್ತಕ ಲೋಕಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಇಂದು 66ನೇ ರಾಜ್ಯೋತ್ಸವ ಸಂದರ್ಭದಲ್ಲಿ 66 ಕನ್ನಡ ಪುಸ್ತಕಗಳನ್ನು ಲೋಕಾರ್ಪಣೆ ಮಾಡುವ ಮೂಲಕ ತಾವು ಶ್ರೇಷ್ಠ ಕನ್ನಡಿಗ ಎನ್ನುವುದನ್ನು ನಿರೂಪಿಸಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ 'ಅವ್ವ' ಕಥಾ ಸಂಕಲನ:

ಮುಖ್ಯಮಂತ್ರಿಗಳು ‘ಅವ್ವ’ ಎಂಬ ಹೆಸರಿನ ಕಥಾ ಸಂಕಲನವನ್ನು ಹೊರ ತರುತ್ತಿದ್ದು, ಸಾಹಿತ್ಯ ಕ್ಷೇತ್ರಕ್ಕೆ ತಾವೂ ಸಣ್ಣ ಕೊಡುಗೆ ನೀಡುತ್ತಿರುವುದಾಗಿ ತಿಳಿಸಿದರು. ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರೋತ್ಸಾಹಿಸಬೇಕೆಂದು ನಾಡಿನ ಜನತೆಗೆ ಈ ಸಂದರ್ಭದಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಕಮಲಾ ಹಂಪನಾ, ಹಿರಿಯ ಕವಿಗಳಾದ ಎಚ್. ಎಸ್ .ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ, ಸಪ್ನ ಬುಕ್ ಹೌಸ್ ಮುಖಸ್ಥ ನಿತಿನ್ ಷಾ, ಪತ್ರಕರ್ತ ರವಿ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ABOUT THE AUTHOR

...view details