ಬೆಂಗಳೂರು: ಅಂತಾರಾಜ್ಯ ಜಲವಿವಾದಗಳ ಬಗ್ಗೆ ಅಗತ್ಯ ಬಿದ್ದರೆ ಸರ್ವಪಕ್ಷ ನಿಯೋಗವನ್ನು ದಿಲ್ಲಿಗೆ ಕರೆದೊಯ್ದು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ಅಂತಾರಾಜ್ಯ ಜಲವಿವಾದ ಬಗ್ಗೆ ಸರ್ವಪಕ್ಷ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಜಲ ವಿವಾದಗಳ ಬಗ್ಗೆ ಸುದೀರ್ಘವಾದ ಚರ್ಚೆ ಆಗಿದೆ. ಮೇಕೆದಾಟು ಬಗ್ಗೆ ಚರ್ಚೆ ಆಗಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಬಳಿ ಡಿಪಿಆರ್ ಇದೆ. ಇದರ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಪ್ರಾಧಿಕಾರದ ಪ್ರೊಸೀಡಿಂಗ್ಸ್ ನಲ್ಲಿ ಏನೆಲ್ಲ ಚರ್ಚೆ ಆಗಿದೆ ಅಂತ ಮಾಹಿತಿ ಕೇಳಿದ್ದೇವೆ. ಕೇಂದ್ರದ ಪರಿಸರ ಇಲಾಖೆಯಿಂದಲೂ ಯೋಜನೆಗೆ ಅನುಮತಿ ಸಿಗಬೇಕಿದೆ. ಮುಂದಿನ ಸೋಮವಾರ ಅಥವಾ ಮಂಗಳವಾರ ದೆಹಲಿಗೆ ಗೋವಿಂದ ಕಾರಜೋಳ ಭೇಟಿ ನೀಡಲಿದ್ದಾರೆ. ಕೇಂದ್ರದ ಬಳಿ ಕಾರಜೋಳ ಅವರು ಇವತ್ತಿನ ಸಭೆ ಬಗ್ಗೆ ಮಾಹಿತಿ ತಿಳಿಸ್ತಾರೆ. ನಾನು ಅಧಿವೇಶನ ಮುಗಿದ ಬಳಿಕ ದೆಹಲಿಗೆ ಹೋಗ್ತೇನೆ. ಕೇಂದ್ರದ ಸಚಿವರ ಜತೆ ಎಲ್ಲ ಜಲವಿವಾದಗಳ ಬಗ್ಗೆಯೂ ಚರ್ಚೆ ನಡೆಸ್ತೇನೆ ಎಂದು ಹೇಳಿದರು.
ಮೇಕೆದಾಟು ಯೋಜನೆಗೆ ಆದಷ್ಟು ಬೇಗ ಪರಿಸರ ಇಲಾಖೆ ಅನುಮತಿ ಸಿಗುವ ವಿಶ್ವಾಸ ಇದೆ. ಇದೆಲ್ಲ ಆದ ಬಳಿಕ ಅಗತ್ಯವಾದರೆ ಸರ್ವಪಕ್ಷ ನಾಯಕರ ನಿಯೋಗವನ್ನು ಕರೆದೊಯ್ಯಲು ನಿರ್ಧರಿಸಿದ್ದೇವೆ. ಅಗತ್ಯ ಕಂಡುಬಂದರೆ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯುತ್ತೇವೆ. ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.