ಬೆಂಗಳೂರು:ರಾಜ್ಯದಲ್ಲಿ ನಿರಂತರವಾಗಿ ಅಕಾಲಿಕ ಮಳೆ (Heavy rain in Karnataka) ಸುರಿಯುತ್ತಿದ್ದು, ಎಲ್ಲೆಡೆ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಮಳೆ ಹಾನಿ (Rain Effect) ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳ ಸಭೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ತಮ್ಮ ನಿವಾಸದಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ದಕ್ಷಿಣ, ಉತ್ತರ ಒಳನಾಡು, ಕರಾವಳಿಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಕಳೆದ ಮೂರು ದಿನಗಳಲ್ಲಿ ಬೆಳೆ ಹಾನಿ, ರಸ್ತೆ ಹಾನಿ, ಕೆಲವು ಸಾವು ಸಂಭವಿಸಿದೆ. ಜುಲೈ, ಆಗಸ್ಟ್, ಸೆಪ್ಟೆಂಬರ್ನಲ್ಲಿ ಸುರಿದ ಮಳೆಗೆ 3 ಲಕ್ಷ ರೂ. ಬೆಳೆ ಹಾನಿಯಾಗಿತ್ತು. 130 ಕೋಟಿ ಬೆಳೆ ಪರಿಹಾರ ಬಾಕಿ ಇದೆ. ಮೊನ್ನೆ ಅದನ್ನು ಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂದು ಸಂಜೆ ಅಧಿಕಾರಿಗಳು ಕೊಟ್ಟ ವರದಿ ಬಗ್ಗೆ ಚರ್ಚೆ ನಡೆಸಿ, ಪರಿಹಾರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಆಯೋಗದ ಅನುಮತಿ ಅಗತ್ಯ:
ಕೆಲವು ಸಚಿವರು ಜಿಲ್ಲೆಗಳಲ್ಲೇ ಇದ್ದಾರೆ. ಜಿಲ್ಲೆಗಳಿಗೆ ಹೋಗಲು ಚುನಾವಣಾ ಆಯೋಗದ ಅನುಮತಿ ನೀಡಬೇಕು. ಶನಿವಾರ ಸಿ.ಎಸ್ ಮೂಲಕ ಆಯೋಗಕ್ಕೆ ಈ ಬಗ್ಗೆ ಕೇಳಿದ್ದೇವೆ. ಆಯೋಗ ಅನುಮತಿ ಕೊಟ್ಟರೆ ಎಲ್ಲ ಸಚಿವರೂ ಜಿಲ್ಲೆಗಳಿಗೆ ಹೋಗಲಿದ್ದಾರೆ ಎಂದು ಸಿಎಂ ಹೇಳಿದರು.