ಬೆಂಗಳೂರು: ಕರ್ನಾಟಕದಲ್ಲಿ ಅತಿ ದೊಡ್ಡ ಕಬ್ಬಿಣದ ಕಾರ್ಖಾನೆ ಇದ್ದು 4 - 5 ವರ್ಷಗಳಲ್ಲಿ ವಿಶ್ವದ ಅತಿ ದೊಡ್ಡ ಕಬ್ಬಿಣ ಅದಿರು ಉತ್ಪಾದನೆ ಮಾಡುವ ರಾಜ್ಯವಾಗಲಿದೆ ಕರ್ನಾಟಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾರತ ಸರ್ಕಾರದ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದಿಂದ ಹಮ್ಮಿಕೊಂಡಿದ್ದ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಮತ್ತು ಗಣಿಗಾರಿಕೆ ವಲಯದಲ್ಲಿನ ಅವಕಾಶಗಳ ಕುರಿತ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಡಿಶಾ ಗಣಿಗಾರಿಕೆಯ ರಾಜ್ಯವಾಗಿದೆ. ಅಲ್ಲಿ ಗಣಿಗಾರಿಕೆ ಪ್ರಮುಖ ಉದ್ಯಮ, ಅದನ್ನು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಲ್ಲಿನ ನೀತಿಗಳನ್ನೇ ಇತರ ರಾಜ್ಯಗಳಿಗೆ ಅನ್ವಯಿಸುವುದು ಕೂಡ ಸೂಕ್ತವಲ್ಲ.
ರಾಜ್ಯದಲ್ಲಿರುವ ಗುಣಮಟ್ಟದ ಗಣಿಗಳಿಂದ ಮಾತ್ರ ಉತ್ಪಾದನೆ ಸಾಧ್ಯವಾಗಲಿದೆ ಎಂದರು. ಅನೇಕ ಗಣಿ ಕಂಪನಿಗಳು ಕೋಲಾರ ಚಿನ್ನದ ಗಣಿ ಮರು ಆರಂಭಿಸಲು ಮನವಿ ಸಲ್ಲಿಸಿವೆ. ಗಣಿ ನೀತಿಯಲ್ಲಿ ರಾಜ್ಯ ಸರ್ಕಾರ ನಿಯಮಗಳನ್ನು ಸರಳಿಕರಣಗೊಳಿಸಿದೆ. ಗಣಿ ಉದ್ಯಮಿಗಳು ರಾಜ್ಯದಲ್ಲಿ ಗಣಿಗಾರಿಕೆ ನಡೆಸಲು ಆಗಮಿಸಿ ಈ ಮೂಲಕ ರಾಜ್ಯದ ಆದಾಯ ವೃದ್ಧಿಗೆ ಕೊಡುಗೆ ನೀಡಬೇಕೆಂದರು.
ಅತ್ಯುತ್ತಮ ಗಣಿ ಸಂಸ್ಕೃತಿಯನ್ನು ಜಾರಿಗೆ ತರಬೇಕಿದೆ. 5 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ಗಣಿಗಾರಿಕೆ ವಲಯ, ಸರ್ಕಾರ ಕ್ಕೂ ಆದಾಯ ತರಲಿದೆ. ಗಣಿಗಾರಿಕೆ ಸಂಸ್ಕೃತಿ ಹೆಚ್ಚಿನ ಚಿನ್ನ, ಗಣಿ ಹಾಗೂ ಪರಿಸರ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳುತ್ತದೆ ಹಾಗೂ ಸುಸ್ಥಿರತೆಯನ್ನೂ ತರಲಿದೆ. ವೈಜ್ಞಾನಿಕವಾಗಿ ಗಣಿಗಾರಿಕೆ ಮಾಡದಿದ್ದರೆ, ಉತ್ಪಾದನೆಯನ್ನು ಹೆಚ್ಚುಗೊಳಿಸಲಾಗುವುದಿಲ್ಲ ಹಾಗೂ ಭವಿಷ್ಯಕ್ಕೆ ಉಳಿಯುವುದೂ ಇಲ್ಲ.
ಗಣಿಗಾರಿಕೆಯಲ್ಲಿ ಸುಸ್ಥಿರತೆ:ಪ್ರಧಾನಿ ನರೇಂದ್ರ ಮೋದಿಯವರು ಒಬ್ಬ ದಾರ್ಶನಿಕ. ಅವರ ಗುರಿಗಳ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ. ಅವರು ಹಿಂದಿನ ಆಳ್ವಿಕೆಗಳ ತಪ್ಪುಗಳ ಬಗ್ಗೆ ಮಾಹಿತಿ ಇದೆ. ಆದ್ದರಿಂದ ನೂತನ ಗಣಿ ನೀತಿಯನ್ನು ಜಾರಿಗೆ ತಂದು ಗರಿಷ್ಠ ಉತ್ಪಾದನೆ ಹಾಗೂ ಸುಸ್ಥಿರತೆಯನ್ನು ತಂದಿದ್ದಾರೆ. ಪಾರದರ್ಶಕ, ವೈಜ್ಞಾನಿಕ ರೀತಿಯಲ್ಲಿ ಗಣಿಕಾರಿಕೆ ಕೈಗೊಳ್ಳಲು ನೂತನ ವಿಧಾನ, ಯಂತ್ರಗಳು ಬಂದಿವೆ. ಗಣಿಕಾರಿಕೆಯನ್ನು ವೃತ್ತಿಯಾಗಿ ಕೈಗೆತ್ತಿಕೊಳ್ಳಲು ಇದು ಸಕಾಲ. ಈ ರೀತಿಯ ವಾತಾವರಣ 7-8 ವರ್ಷಗಳ ಹಿಂದೆ ಇರಲಿಲ್ಲ ಎಂದರು.