ಬೆಂಗಳೂರು: ಕಾಂಗ್ರೆಸ್ ಆಧಾರ ರಹಿತ, ರಾಜಕೀಯ ಪ್ರೇರಿತ ಟ್ವೀಟ್ ಮೂಲಕ ಗೊಂದಲ ಸೃಷ್ಟಿಸಲು ಮುಂದಾಗಿದೆ. ಆದರೆ, ನಾನು ಸ್ಥಿತಪ್ರಜ್ಞನಾಗಿದ್ದೇನೆ, ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ ಹೇಳಿಕೆಯಿಂದ ನನ್ನ ನಿರ್ಣಯಗಳು ಮತ್ತಷ್ಟು ಗಟ್ಟಿಯಾಗಲಿವೆ. ಮತ್ತಷ್ಟು ಹೆಚ್ಚಿನ ಕೆಲಸ ಮಾಡಬೇಕು ಎನ್ನುವ ಪ್ರೇರಣೆ ಸಿಕ್ಕಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಈ ರೀತಿ ಟ್ವೀಟ್ ಮಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಅವರ ಮನಸ್ಸಿನಲ್ಲಿ ಅತಂತ್ರವಿದೆ. ಅದನ್ನು ರಾಜ್ಯದ ತುಂಬಾ ಜನರ ಮನಸ್ಸಿನಲ್ಲಿ ನೆಡಬೇಕು ಎಂದು ಕೊಂಡಿದ್ದಾರೆ. ಆದರೆ, ರಾಜ್ಯದ ಜನ ಅದನ್ನು ನಂಬುವುದಿಲ್ಲ, ನಂಬುವ ಸ್ಥಿತಿಯಲ್ಲಿಯೂ ಇಲ್ಲ. ಇದೊಂದು ರಾಜಕೀಯ ಪ್ರೇರಿತ ಎಂದು ನನಗೆ ಗೊತ್ತಿದೆ. ಇದರಿಂದಾಗಿ ಇನ್ನಷ್ಟು ಹೆಚ್ಚಿನ ಕೆಲಸಗಳನ್ನು ಜನರಿಗೆ, ರಾಜ್ಯಕ್ಕೆ ಮಾಡಬೇಕು ಎನ್ನುವ ಪ್ರೇರಣೆ ಉಂಟಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಪಕ್ಷ ಬಲವರ್ಧನೆಗೆ ಒತ್ತು:ಮುಂದಿನ ದಿನಗಳಲ್ಲಿ ಇನ್ನೂ ಎರಡು ತಾಸು ಹೆಚ್ಚಿನ ಸಮಯವನ್ನು ಕೆಲಸಕ್ಕೆ ಮೀಸಲಿಡುತ್ತೇನೆ. ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜೊತೆಗೆ ಬರುವ ದಿನಗಳಲ್ಲಿ ಪಕ್ಷ ಬಲವರ್ಧನೆ ಮತ್ತು ಜನರ ಬಳಿ ಹೋಗುವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಿದ್ದೇವೆ ಎಂದು ಹೇಳಿದರು. ಇನ್ನು ಮುಖ್ಯಮಂತ್ರಿ ಬದಲಾವಣೆ ಕುರಿತು ಬಿಜೆಪಿಯ ಮಾಜಿ ಶಾಸಕ ಸುರೇಶ್ ಗೌಡ ಹೇಳಿಕೆಗೆ ಅಷ್ಟು ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.