ಬೆಂಗಳೂರು:ಭಾರತವನ್ನು ವಿಶ್ವ ಗುರುವಾಗಿಸುವಲ್ಲಿ ಕರ್ನಾಟಕ ಅತ್ಯಂತ ದೊಡ್ಡ ಕೊಡುಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡ "ಏರೋ ಇಂಡಿಯಾ ಶೋ 2023" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಕಾರ್ಯಸಾಧನೆಗೆ ಪ್ರಧಾನಿ ಅವರ ಆಶಯದಂತೆ ಕರ್ನಾಟಕ ಆರ್ಥಿಕತೆ, ಸಾಮಾಜಿಕ ವ್ಯವಸ್ಥೆ ಹಾಗೂ ರಕ್ಷಣಾ ವಲಯದಲ್ಲಿ ಕೊಡುಗೆ ನೀಡಲಿದೆ. ಏರೋ ಇಂಡಿಯಾ ಶೋ 14 ನೇ ಆವೃತ್ತಿಯ ಗಾತ್ರ, ಪ್ರದರ್ಶನ ಮತ್ತು ಕಾರ್ಯವೈಖರಿಯ ದೃಷ್ಟಿಯಿಂದ ಅತ್ಯಂತ ವಿಶೇಷವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಅತಿದೊಡ್ಡ ಏರ್ ಶೋ ಇದಾಗಿದೆ. ರಕ್ಷಣಾ ವಲಯ ಹಾಗೂ ಏರ್ ಶೋ ಪ್ರದರ್ಶನದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ನಿರೂಪಿಸಿದೆ. ಕೋವಿಡ್ ಸಂದರ್ಭದಲ್ಲಿ ಪ್ಯಾರೀಸ್ ಏರ್ ಶೋ ನಡೆಯದಿದ್ದಾಗ, ನಮ್ಮ ಏರ್ ಶೋ ಯಶಸ್ವಿಯಾಗಿ ಜರುಗಿತು. ಈ ಬಾರಿ ವಸ್ತು ಪ್ರದರ್ಶನದ ವಿಸ್ತೀರ್ಣ, ಪ್ರದರ್ಶಕರ ಸಂಖ್ಯೆಯೂ ಹೆಚ್ಚಾಗಿದೆ ಎಂದರು.
ರಕ್ಷಣಾ ವಲಯದಲ್ಲಿ ರಾಜ್ಯ ಮುಂಚೂಣಿ:ಕರ್ನಾಟಕದಲ್ಲಿ 1940 ರಲ್ಲಿ ಹೆಚ್ಎಎಲ್, 1950 ರಲ್ಲಿ ಬಿಹೆಚ್ಇಎಲ್, ಬಿಇ ಎಲ್, ಡಿಆರ್ಡಿಒ ಸ್ಥಾಪನೆಗೊಂಡವು. 1960 ರಲ್ಲಿ ಇಸ್ರೋ ಕಾರ್ಯಾರಂಭ ಮಾಡಿದರೆ, 1970 ರಲ್ಲಿ ಮೊದಲ ಉಪಗ್ರಹ ಆರ್ಯಭಟವನ್ನು ಬೆಂಗಳೂರಿನಲ್ಲಿ ತಯಾರಿಸಲಾಯಿತು. ಅಲ್ಲಿಂದ ನಾವು ಹಿಂತಿರುಗಿ ನೋಡಿಲ್ಲ. ಈಗ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವೆಂದರೆ ಅದು ಕರ್ನಾಟಕ. ರಕ್ಷಣಾ ವಲಯದ ಶೇ.65 ರಷ್ಟು ಉತ್ಪಾದನೆ ಬೆಂಗಳೂರಿನಲ್ಲಿ ಆಗುತ್ತಿದೆ ಎಂದರು.