ಬೆಂಗಳೂರು: ಬಸವರಾಜ ಬೊಮ್ಮಾಯಿ ಇಡೀ ಕರ್ನಾಟಕದ ಮುಖ್ಯಮಂತ್ರಿ. ಕೇವಲ ಬಿಜೆಪಿಗಷ್ಟೇ ಅಲ್ಲ. ನಿನ್ನೆಯ ದಿನ ಅವರು ಮಸೂದ್ ಮತ್ತು ಪ್ರವೀಣ್ ನಿಟ್ಟಾರು ಹತ್ಯೆಯಾದ ಬೆಳ್ಳಾರೆ ಗ್ರಾಮಕ್ಕೆ ಭೇಟಿ ನೀಡಿದಾಗ ಸಂವಿಧಾನದತ್ತವಾಗಿ ಸ್ವೀಕರಿಸಿದ ಪ್ರಮಾಣವಚನದ ಪಾವಿತ್ರ್ಯತೆಗೆ ಚ್ಯುತಿ ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಟೀಕಿದ್ದಾರೆ.
ರಾಜಧರ್ಮ ಪಾಲಿಸಿ ಎಂದು ಹಿಂದೊಮ್ಮೆ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ರಾಜಧರ್ಮ ಪಾಲಿಸುವುದಿರಲಿ, ಸ್ವಧರ್ಮವೇ ಹೇಳಿದ 'ಸರ್ವೇ ಜನೋ ಸುಖಿನೋ ಭವಂತು' ಎನ್ನುವ ತತ್ತ್ವವನ್ನೂ ಪಾಲಿಸುತ್ತಿಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಜನ್ಮ ದಿನದಂದೇ ಮಣ್ಣಾದ ಫಾಜಿಲ್... ಮಗನ ಹುಟ್ಟಹಬ್ಬ ಆಚರಿಸಬೇಕಿದ್ದ ಪೋಷಕರಿಂದ ಅಂತ್ಯಸಂಸ್ಕಾರ
ಕೊಲೆಗೆ ಕೊಲೆಯೇ ಉತ್ತರವಲ್ಲ. ಪ್ರತೀಕಾರಕ್ಕೆ ಪ್ರತೀಕಾರ ಪ್ರತ್ಯುತ್ತರವಲ್ಲ. ಮುಖ್ಯಮಂತ್ರಿ ನಡೆ ಹಿಂಸೆಯನ್ನು ಪ್ರಚೋದಿಸುವಂತಿದೆ. ಕೊಲೆಯಾದ ಇಬ್ಬರೂ ಯುವಕರ ಮನೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಕೊಲೆಗೆಡುಕರಿಗೆ ಕಠಿಣ ಸಂದೇಶ ರವಾನಿಸಬೇಕಿತ್ತು. ಹಾಗೆ ಮಾಡಲಿಲ್ಲ. ರಕ್ತದಲ್ಲಿ ಜಾತಿ-ಧರ್ಮಗಳ ಗುಂಪುಗಳಿವೆಯಾ?. ಅಷ್ಟು ಸರಳ ವಿಷಯ ಮುಖ್ಯಮಂತ್ರಿಗೇ ಗೊತ್ತಿಲ್ಲದಿದ್ದರೆ ಹೇಗೆ?. ಅವರು ಇದ್ದಾಗಲೇ ಮಂಗಳೂರಿನಲ್ಲಿ ಇನ್ನೊಂದು ಕೊಲೆ ನಡೆಯಿತು ಎಂದರೆ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.