ಬೆಂಗಳೂರು: ಕರ್ನಾಟಕದಲ್ಲಿ ಅಭಿವೃದ್ಧಿ ಹಾಗೂ ನಾವೀನ್ಯತೆಯ ಪಯಣಕ್ಕೆ ಕಾರಣವಾಗಿರುವ ಸಾಧಕರ ಸಾಧನೆಗಳನ್ನು ಬಿಂಬಿಸುವ (ಇನ್ನೋವೇಷನ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ) ನಾವೀನ್ಯತಾ ಅನುಭವ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಅಶೋಕ ಹೋಟೆಲ್ನಲ್ಲಿ ಬೆಂಗಳೂರು ವಿನ್ಯಾಸಕಾರರ ಸಮುದಾಯದ ವತಿಯಿಂದ ಆಯೋಜಿಸಿದ್ದ ಬಿ.ಎಲ್.ಆರ್ ಡಿಸೈನ್ ವೀಕ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ನಾವೀನ್ಯತೆ, ಅವಿಷ್ಕಾರಗಳ ಬಗ್ಗೆ ಮಾಹಿತಿ ನೀಡುವ ಅಂತಾರಾಷ್ಟ್ರೀಯ ಮಟ್ಟದ ಮ್ಯೂಸಿಯಂ ಇದಾಗಲಿದ್ದು, ಹಸಿರಿನ ಪರಿಸರವನ್ನೂ ಒಳಗೊಂಡಿರಲಿದೆ. ಇದರಿಂದ ವಿದೇಶಿ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ದೊರೆಯುತ್ತದೆ. ಈ ಮ್ಯೂಸಿಯಂನಿಂದ ಯುವ ಆವಿಷ್ಕಾರಿಗಳು, ವಿನ್ಯಾಸಕಾರರಿಗೆ ಸ್ಪೂರ್ತಿ ದೊರೆಯಲಿದೆ ಎಂದರು.
ಬೆಂಗಳೂರಿಗೆ 8 ನಗರ ಕೇಂದ್ರಗಳ ನಿರ್ಮಾಣ: ವಿಶ್ವದ ಯಾವುದೇ ಸಣ್ಣ ನಗರದಲ್ಲಿ ಒಂದು ನಗರ ಕೇಂದ್ರವಿರುವಂತೆ, ಬೆಂಗಳೂರಿನ 8 ದಿಕ್ಕುಗಳಲ್ಲಿ 8 ನಗರ ಕೇಂದ್ರಗಳ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರು ನಗರಕ್ಕೆ ಮಾತ್ರ ನಗರಕೇಂದ್ರವೆಂಬುದಿಲ್ಲ. ಆದ್ದರಿಂದ 8 ನಗರಕೇಂದ್ರಗಳನ್ನು ನಿರ್ಮಿಸಿ, ಇದಕ್ಕೆ ಪೂರಕವಾಗಿ ರಸ್ತೆ, ರೈಲುಗಳನ್ನು ಅಭಿವೃದ್ಧಿಗೊಳಿಸಬಹುದು. ಈ ಯೋಜನೆಗೆ ಬೇಕಾದ ಸಲಹೆಗಳನ್ನು ವಿನ್ಯಾಸಕಾರರಿಂದ ಬಯಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
400 ಸಂಶೋಧನಾ ಕೇಂದ್ರ: ಬೆಂಗಳೂರು ಜನರ ನೆಚ್ಚಿನ ನಗರವಾಗಿದ್ದು, ಈ ನಗರದಲ್ಲಿ ಆವಿಷ್ಕಾರ ಸೇರಿದಂತೆ ವಿವಿಧ ರಂಗಗಳಲ್ಲಿ ಪ್ರತಿಭಾವಂತರಿದ್ದಾರೆ. ಜೆನೋಟಿಕ್ಸ್‌ನಿಂದ ಏರೋಸ್ಪೇಸ್ವರೆಗೆ 400 ಸಂಶೋಧನಾ ಕೇಂದ್ರಗಳಿವೆ. ರಾಜ್ಯದಲ್ಲಿ 400 ಫಾರ್ಚೂನ್ ಕಂಪನಿಗಳಿವೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬೆಂಗಳೂರಿನಲ್ಲಿ ಅಭಿವೃದ್ಧಿಗೆ ಬಹಳ ಅವಕಾಶಗಳಿವೆ. ಬೆಂಗಳೂರಿನ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಸಕಾರಾತ್ಮಕತೆ ಎಲ್ಲರಲ್ಲೂ ಇರಬೇಕು. ಇದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡುತ್ತದೆ ಎಂದರು.
ಉತ್ತಮ ವಿನ್ಯಾಸ ಸ್ಫೂರ್ತಿ ನೀಡುತ್ತದೆ: ಉತ್ತಮ ವಿನ್ಯಾಸಕಾರರು ಸೂಕ್ಷ್ಮವಾಗಿ ಗಮನಿಸಬೇಕು ಹಾಗೂ ಆಂತರ್ಯವನ್ನು ನೋಡಬೇಕು. ನಿಮ್ಮ ಆತ್ಮಸಾಕ್ಷಿಯ ಮಾತನ್ನು ಕೇಳಬೇಕು. ಆಗಲೇ ಉತ್ತಮ ವಿನ್ಯಾಸಗಳು ಹೊರಹೊಮ್ಮಲು ಸಾಧ್ಯ. ಹೊಸ ವಿನ್ಯಾಸಗಳು ಹೆಚ್ಚಿನ ವ್ಯತ್ಯಾಸವನ್ನು ಮಾಡುವ ಜೊತೆಗೆ ಪರಿಣಾಮವನ್ನೂ ಬೀರುತ್ತದೆ. ಯುವ ವಿನ್ಯಾಸಕಾರರು, ಜೀವನದಲ್ಲಿ ಸುಧಾರಣೆಗಳನ್ನು ತರುವಂತಹ ವಿನ್ಯಾಸಗಳನ್ನು ಮಾಡುವ ಶಕ್ತಿಯನ್ನು ಪ್ರತಿಭೆಯನ್ನು ಹೊಂದಿದ್ದಾರೆ. ಉತ್ತಮ ವಿನ್ಯಾಸ ಸ್ಪೂರ್ತಿಯನ್ನೂ ನೀಡುತ್ತದೆ. ವಿನ್ಯಾಸ ರಚನೆ ನಿರಂತರವಾದ ಪ್ರಕ್ರಿಯೆ ಎಂದರು.