ಬೆಂಗಳೂರು: ಶಿಕಾರಿಪುರದಲ್ಲಿ ವಿಜಯೇಂದ್ರರ ಸ್ಪರ್ಧೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅವರು ನಿನ್ನೆ ನೀಡಿದ್ದು ಸಲಹೆ ಅಷ್ಟೇ. ಕ್ಷೇತ್ರದ ಜನರು ಚುನಾವಣೆ ಬಗ್ಗೆ ಕೇಳಿದ್ದಕ್ಕೆ ಯಡಿಯೂರಪ್ಪ ಹಾಗೆ ಹೇಳಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ಬೊಮ್ಮಾಯಿ ಹಾಗೂ ಸಚಿವ ಆರ್.ಅಶೋಕ್ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ಚುನಾವಣೆಗೆ ನಿಲ್ಲುವಂತೆ ಕ್ಷೇತ್ರದ ಜನರು ಪದೇ ಪದೆ ಕೇಳುತ್ತಿದ್ರು, ಹಾಗಾಗಿ ಯಡಿಯೂರಪ್ಪನವರು ನಿನ್ನೆ ಆ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಬಗ್ಗೆ ಮಾತ್ರವಲ್ಲ, ಇಡೀ ರಾಜ್ಯದ ಬಗ್ಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಯಡಿಯೂರಪ್ಪ ಎಂದರೆ ಒಂದು ದೊಡ್ಡ ಶಕ್ತಿ. ನಾಲ್ಕು ದಶಕಗಳಿಂದ ರಾಜಕೀಯದಲ್ಲಿ ಇದ್ದಾರೆ. ಯಡಿಯೂರಪ್ಪ ಹೇಳಿಕೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ. ಅವರು ಸಿಎಂ ಸ್ಥಾನದಿಂದ ಇಳಿದಾಗಲೇ ಇಕ್ಕಟ್ಟು ಸೃಷ್ಟಿ ಮಾಡಿರಲಿಲ್ಲ. ಈಗ ಸೃಷ್ಟಿ ಮಾಡ್ತಾರಾ?. ಯಡಿಯೂರಪ್ಪ ತಮಗೆ ಅನಿಸಿದ್ದನ್ನು ಮಾಧ್ಯಮದ ಮುಂದೆ ಹೇಳ್ತಾರೆ. ಅದು ಸಲಹೆ ಅಷ್ಟೇ ಎಂದರು.
ದಯವಿಟ್ಟು ಗೊಂದಲಕ್ಕೆ ಯಾರೂ ಒಳಗಾಗಬೇಡಿ. ಅವರು ಸಿಎಂ ಸ್ಥಾನವನ್ನೇ ಬಿಟ್ಟುಕೊಟ್ರು. ಅಂತಹ ಹಿರಿಯರು ಅವರು. ವಿಜಯೇಂದ್ರರ ಬಗ್ಗೆ ಪ್ರೀತಿಯನ್ನು ತೋರಿಸಿದ್ದಾರೆ. ಅವರು ಸಲಹೆ ಕೊಟ್ಟಿದ್ದಾರೆ ಹೊರತು ಬೇರೇನೂ ಇಲ್ಲ. ಅಂತಿಮವಾಗಿ ವರಿಷ್ಠರು ತೀರ್ಮಾನ ಮಾಡ್ತಾರೆ. ಆದರೆ ಕಾಂಗ್ರೆಸ್ ಅಯೋಮಯ ಆಗಿದೆ. ಮೊದಲು ಜಾತಿವಾರು ಮತಗಳನ್ನು ಕೇಳುವುದನ್ನು ಬಿಡಲಿ ಎಂದು ಟೀಕಿಸಿದರು.