ಬೆಂಗಳೂರು:ಯಾವುದೇ ಒಬ್ಬರಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂಬ ಪರಿಕಲ್ಪನೆ ತಪ್ಪು, ಸ್ವಾತಂತ್ರ್ಯಕ್ಕಾಗಿ ಅನೇಕ ಜನ ಪ್ರಾಣ ಬಲಿದಾನ ಮಾಡಿದ್ದಾರೆ ಎಂದು ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಫೋಟೋ ಕೈಬಿಟ್ಟಿದ್ದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಆಯೋಜಿಸಲಾಗಿದ್ದ ದೇಶ ವಿಭಜನೆ ಕರಾಳ ನೆನಪು ಹಾಗೂ ವಸ್ತು ಪ್ರದರ್ಶನವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ನಂತರ ದೇಶ ವಿಭಜನೆಯ ಕರಾಳ ದಿನದ ಛಾಯಾಚಿತ್ರ ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಫೋಟೋ ಕೈ ಬಿಟ್ಟ ವಿಚಾರ ಕಾಂಗ್ರೆಸ್ ಪ್ರಸ್ತಾಪಿಸಿದೆ, ನಾನು ಕಾಂಗ್ರೆಸ್ನವರಿಗೆ ಒಂದು ಪ್ರಶ್ನೆ ಕೇಳುತ್ತೇನೆ, ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರನ್ನೇ ಎಲ್ಲೂ ಇಲ್ಲದಂತೆ ಮಾಡಿದ್ದರು, ಆವಾಗ ಇವರಿಗೆ ಅಂಬೇಡ್ಕರ್ ನೆನಪಾಗಿಲ್ವಾ? ದೇಶಕ್ಕೆ ಸ್ವಾತಂತ್ರ್ಯ ಹೋರಾಟ ಮಾಡಿದ ವಲ್ಲಭಭಾಯ್ ಪಟೇಲ್ರನ್ನ ಮರೆಸಿದ್ದರು, ಯಾವುದೇ ಒಬ್ಬರಿಂದ ಸ್ವಾತಂತ್ರ್ಯ ಬಂದಿದೆ ಎಂಬ ಪರಿಕಲ್ಪನೆ ತಪ್ಪು. ಅನೇಕ ಜನ ಪ್ರಾಣ ಬಲಿದಾನ ಮಾಡಿದ್ದಾರೆ. 75ನೇ ಸ್ವಾತಂತ್ರ್ಯೋವ ಅನಾಮಧೇಯ ಹೋರಾಟಗಾರರಿಗೆ ಮೀಸಲಿಟ್ಟಿದ್ದು, ಎಲ್ಲೇ ಹೋದರು ನೆಹರು ಹೆಸರು ಇಟ್ಟಿದ್ದೇವೆ, ಜಾಹೀರಾತಿನಲ್ಲೂ ನೆಹರೂ ಇದ್ದಾರೆ ಆದರೂ ಯಾಕಿಷ್ಟು ಗಾಬರಿ ಕಾಂಗ್ರೆಸ್ಸಿಗರಿಗೆ..!? ಎಂದು ಪ್ರಶ್ನಿಸಿದರು.
ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಚಂದ್ರಶೇಖರ್ ಅಜಾದ್ ಇವರಿಗೆ ನೆನಪಾಗಿಲ್ಲ? ನಿಜವಾದಂತಹ ಹೋರಾಟಗಾರರ ಸವಿನೆನಪು ಕರ್ನಾಟಕದಲ್ಲಿ ಮಾಡಿಕೊಟ್ಟಿದ್ದೇವೆ ಅವರಿಗೆ ನಮನ ಸಲ್ಲಿಸಿದ್ದು ಕರ್ನಾಟಕದಲ್ಲಿ ಮಾತ್ರ. ಹಿಂದೆಂದೂ ಕೂಡ ನೆನಪು ಮಾಡಿಕೊಂಡ ದಾಖಲೆಗಳು ಇಲ್ಲ ಅದನ್ನ ಅಭಿನಂದಿಸಬೇಕು ಎಲ್ಲರನ್ನು ನೆನಪು ಮಾಡಿಕೊಂಡಿದ್ದೀವಿ ಅಂತಾ ಅಭಿನಂದನೆ ಸಲ್ಲಿಸಬೇಕು, ದಾದಾಬಾಯಿ ನವರೋಜಿ, ಹರ್ಡೇಕರ್ ಅವರನ್ನ ನೆನಪು ಮಾಡಿಕೊಂಡಿದ್ದೇವೆ. ಅವರೆಲ್ಲ ಕಾಂಗ್ರೆಸ್ನವರೆ, ನಾವೇನು ಭೇದ ಭಾವ ಮಾಡಿಲ್ಲ ಎಂದರು.