ಬೆಂಗಳೂರು:ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿಗೆ ಹೋದ ನಂತರ ತಿಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಹಾಗಾಗಿ ಹೈಕಮಾಂಡ್ ಸಂದೇಶವನ್ನು ಎದುರು ನೋಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆರ್.ಟಿ.ನಗರದಲ್ಲಿರುವ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ರಾಜ್ಯ ಭೇಟಿ ವೇಳೆ ಸಂಪುಟ ವಿಸ್ತರಣೆ ವಿಷಯ ಪ್ರಸ್ತಾಪವಾಯಿತು. ಆದರೆ ವಿಸ್ತೃತವಾದ ಚರ್ಚೆ ನಡೆಯಲಿಲ್ಲ ಎಂದರು.
ದೆಹಲಿಗೆ ತೆರಳಿದ ನಂತರ ಚರ್ಚೆ ಮಾಡಿ ತಿಳಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಆದರೆ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅದೆಲ್ಲಾ ಮಾಧ್ಯಮಗಳಿಂದ ಬಂದಿರುವ ವಿಷಯ ಅಷ್ಟೇ ಎಂದು ತಿಳಿಸಿದರು.
ಬಜೆಟ್ ಅನುಷ್ಠಾನಕ್ಕೆ ಸರಣಿ ಸಭೆ:ಬಜೆಟ್ ಅನುಷ್ಠಾನ ಕೂಡಲೇ ಆಗಬೇಕು ಎನ್ನುವ ಕಾರಣಕ್ಕೆ ಆದೇಶಗಳನ್ನು ಮಾಡಬೇಕು ಎನ್ನುವುದು ಮೊದಲ ಹಂತವಾಗಿದೆ. ಆಯಾ ಇಲಾಖೆಯ ಪ್ರಸ್ತಾವನೆ ತೆಗೆದುಕೊಂಡು ಹಣಕಾಸು ಇಲಾಖೆಯ ಅನುಮೋದನೆ ಪಡೆದು ಆದೇಶ ಮಾಡುವುದು ಮೊದಲನೇ ಹಂತ. ಅದು ಬಹುತೇಕ ಮುಗಿದಿದೆ. ಕೆಲವು ಕಾನೂನು ಮತ್ತು ತಾಂತ್ರಿಕ ಕಾರಣಕ್ಕೆ ಶೇಕಡಾ 20ರಷ್ಟು ಅನುಮೋದನೆ ಆಗಿಲ್ಲ. ಅದನ್ನು ಕೂಡಲೇ ಮಾಡಲಾಗುತ್ತದೆ.