ಬೆಂಗಳೂರು:ರಾಜ್ಯದಲ್ಲಿ ನವಕರ್ನಾಟಕದ ನಿರ್ಮಾಣ, ಹೊಸತನದ ನಿರ್ಮಾಣ ಎಸ್.ಎಂ ಕೃಷ್ಣ ಅವಧಿಯಲ್ಲಿ ಆರಂಭಗೊಂಡಿದ್ದು, ನನ್ನ ಆಡಳಿತದಲ್ಲಿ ಕೃಷ್ಣ ಆಡಳಿತದ ಛಾಪು ಇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಎಸ್.ಎಂ ಕೃಷ್ಣ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಂ ಕೃಷ್ಣ ಮತ್ತು ನಮ್ಮ ತಂದೆಯವರು ಅತ್ಯಂತ ಆತ್ಮೀಯ ಸ್ನೇಹಿತರು, ಇಂದು ಅವರನ್ನು ಕಂಡು ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಅವರ ಮಾರ್ಗದರ್ಶನವನ್ನು ಕೇಳಿದ್ದೇನೆ ಅವರ ಆಡಳಿತ ಕಾಲದಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದಾರೆ. ಹಲವಾರು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಒಂದು ರೀತಿಯಲ್ಲಿ ನವಕರ್ನಾಟಕದ ನಿರ್ಮಾಣ, ಹೊಸತನದ ನಿರ್ಮಾಣ, ಐಟಿ-ಬಿಟಿ ಎಲ್ಲವೂ ಕೂಡ ಅವರ ಕಾಲದಲ್ಲಿ ಆರಂಭವಾಗಿದೆ ಹೀಗಾಗಿ ಅವರ ಅನುಭವ ನಮಗೆ ಬಹಳಷ್ಟು ದಾರಿದೀಪವಾಗಲಿದೆ ಎಂದರು.
ಕೃಷ್ಣ ಮಾರ್ಗದರ್ಶನ, ಆಶೀರ್ವಾದ ಮಾಡಿದ್ದಾರೆ:
ಮಾರ್ಗದರ್ಶನ ನೀಡುವಂತೆ ಕೃಷ್ಣ ಅವರನ್ನು ಕೋರಿದಾಗ ಬಹಳ ಸಂತೋಷದಿಂದ ಆಶೀರ್ವಾದ ಮಾಡಿದ್ದಾರೆ. ಮಾರ್ಗದರ್ಶನದ ಭರವಸೆ ನೀಡಿದ್ದಾರೆ, ಹೀಗಾಗಿ ಅವರ ಭೇಟಿಯಿಂದ ನನಗೆ ಆತ್ಮವಿಶ್ವಾಸ ಹೆಚ್ಚಾಗಿದೆ. ಅವರ ಆಡಳಿತದ ವೇಳೆಯಲ್ಲಿನ ಹಲವಾರು ನಿರ್ಣಯಗಳನ್ನು ಈ ಭೇಟಿ ವೇಳೆ ಮೆಲುಕು ಹಾಕಿದ್ದೇವೆ. ಅವೆಲ್ಲವೂ ಬರುವ ದಿನಗಳಲ್ಲಿ ನನಗೆ ಸಹಕಾರಿಯಾಗಲಿದೆ. ನನ್ನ ಆಡಳಿತದಲ್ಲಿ ಕೃಷ್ಣ ಆಡಳಿತದ ಒಂದು ಛಾಪು, ಛಾಯೆ ಖಂಡಿತವಾಗಿಯೂ ಇರಲಿದೆ ಎಂದು ತಿಳಿಸಿದ್ದಾರೆ.