ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿ ಜನಪ್ರಿಯ ಬಜೆಟ್ ಮಂಡನೆಗೆ ತಯಾರಿ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಆದಾಯ ಸಂಗ್ರಹಕ್ಕಾಗಿ ಕಸರತ್ತು ಆರಂಭಿಸಿದ್ದಾರೆ. ಹೆಚ್ಚಿನ ಆದಾಯ ಕ್ರೋಢೀಕರಣಕ್ಕಾಗಿ ಬೊಮ್ಮಾಯಿ ಸರ್ಕಾರ ವಿವಿಧ ರಾಜಸ್ವ ಜಮೆಗಳ ಮೇಲೆ ಕಣ್ಣಿಟ್ಟಿದೆ. ಸಿಎಂ ಬೊಮ್ಮಾಯಿ ಫೆ.17ಕ್ಕೆ 2023-24 ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಚುನಾವಣೆ ವರ್ಷದಲ್ಲಿ ಸಿಎಂ ಸಹಜವಾಗಿಯೇ ಚುನಾವಣಾ ಬಜೆಟ್ ಮಂಡನೆ ಮಾಡಲಿದ್ದಾರೆ. ಅಂದರೆ ಮುಂದಿನ ಚುನಾವಣೆಯಲ್ಲಿ ಅನುಕೂಲವಾಗುವಂತೆ ಜನಪ್ರಿಯ ಘೋಷಣೆಗಳೊಂದಿಗೆ ಬಜೆಟ್ ಮಂಡಿಸುವುದು ಬಹುತೇಕ ಖಚಿತ. ಹೀಗಾಗಿ ಬಜೆಟ್ಗಾಗಿ ದೊಡ್ಡ ಪ್ರಮಾಣದಲ್ಲಿ ಹಣಕಾಸು ನಿರ್ವಹಣೆ ಮಾಡಬೇಕಾಗಿದೆ.
ಜನಪ್ರಿಯ ಯೋಜನೆ ಘೋಷಣೆಗಾಗಿ ಗರಿಷ್ಠ ಪ್ರಮಾಣದಲ್ಲಿ ಆದಾಯ ಸಂಗ್ರಹಿಸುವ ಅನಿವಾರ್ಯತೆ ಬಿಜೆಪಿ ಸರ್ಕಾರಕ್ಕಿದೆ. 2023-24 ಸಾಲಿನಲ್ಲಿ ದೊಡ್ಡ ಪ್ರಮಾಣದ ರಾಜಸ್ವ ವೆಚ್ಚ ಇರುವ ಕಾರಣ ಹೆಚ್ಚಿನ ರಾಜಸ್ವ ಜಮೆಗಳತ್ತ ಸಿಎಂ ಬೊಮ್ಮಾಯಿ ಗಮನ ಹರಿಸಿದ್ದಾರೆ. ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬರದಿದ್ದರೂ, ತಕ್ಕ ಮಟ್ಟಿಗೆ ಅನುದಾನ ಬರಲಿದೆ. ಸದ್ಯ ಸಿಎಂ ಬೊಮ್ಮಾಯಿ ತಮ್ಮ ಬಜೆಟ್ ಘೋಷಣೆಗಳಿಗೆ ಹಣ ಹೊಂದಿಸುವ ನಿಟ್ಟಿನಲ್ಲಿ ರಾಜಸ್ವ ಜಮೆ ಹೆಚ್ಚಿಸಲು ಕಸರತ್ತು ನಡೆಸುತ್ತಿದ್ದಾರೆ.
ಕೇಂದ್ರದ ಹಣದ ಮೇಲೆ ಬೊಮ್ಮಾಯಿ ಕಣ್ಣು: ಸಿಎಂ ಬೊಮ್ಮಾಯಿ ಈ ಬಾರಿ ಬಜೆಟ್ಗಾಗಿ ಕೇಂದ್ರ ಸರ್ಕಾರ ಕೊಡಮಾಡುವ ಅನುದಾನ, ಹಣಕಾಸು ನೆರವಿನತ್ತ ಹೆಚ್ಚಿನ ಗಮನಹರಿಸಿದೆ. ಆ ಮೂಲಕ ಬಜೆಟ್ ಹೊರೆ ಕಡಿಮೆ ಮಾಡುವ ನಿರೀಕ್ಷೆ ಇಟ್ಟಿದೆ. ಚುನಾವಣೆ ವರ್ಷವಾಗಿರುವುದರಿಂದ ಜನರ ಮೇಲೆ ಹೊರೆ ಹಾಕುವಂತಿಲ್ಲ. ಹೀಗಾಗಿ ರಾಜ್ಯ ಮಟ್ಟದಲ್ಲೇ ಅತಿ ಹೆಚ್ಚು ಆದಾಯ ಸಂಗ್ರಹಿಸುವುದು ಕಷ್ಟ ಸಾಧ್ಯವಾಗಲಿದೆ. ಈ ಬಾರಿ ಕೇಂದ್ರ ಬಜೆಟ್ನಲ್ಲಿ ರಾಜ್ಯ ನಿರೀಕ್ಷಿಸಿದಷ್ಟು ಕೊಟ್ಟಿಲ್ಲವಾದರೂ, ತೀರಾ ನಿರಾಶೆಯಾಗುವಂಥ ಪರಿಸ್ಥಿತಿಯೂ ಇಲ್ಲ. ಈ ಬಾರಿ ಕೇಂದ್ರ ಬಜೆಟ್ ನಲ್ಲಿ 15ನೇ ಹಣಕಾಸು ಆಯೋಗದ ವರದಿಯಂತೆ ಕರ್ನಾಟಕಕ್ಕೆ ಅಂದಾಜು 37,252 ಕೋಟಿ ರೂ. ಕೇಂದ್ರದ ತೆರಿಗೆ ಪಾಲು ಬರಲಿದೆ. ಕಳೆದ ವರ್ಷ ರಾಜ್ಯಕ್ಕೆ 29,783 ಕೋಟಿ ರೂ. ಕೇಂದ್ರದ ತೆರಿಗೆ ಪಾಲು ನಿಗದಿ ಮಾಡಲಾಗಿತ್ತು. ಪರಿಷ್ಕರಣೆ ಬಳಿಕ ಅದು 34,596 ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ನು, 2023-24 ಸಾಲಿನಲ್ಲಿ ಅದು 37,252 ಕೋಟಿ ರೂ. ಬರುವ ಅಂದಾಜು ಮಾಡಲಾಗಿದೆ. ಇದು ಸಿಎಂ ಬೊಮ್ಮಾಯಿ ನಿಟ್ಟುಸಿರು ಬಿಡುವಂತಾಗಿದೆ.
2021-22ರಲ್ಲಿ ಜಿಎಸ್ ಟಿ ಪರಿಹಾರ ನೀಡುವಿಕೆ ಕೊನೆಗೊಂಡಿದೆ. ಆದರೆ ಇನ್ನು ಕೇಂದ್ರದಿಂದ ರಾಜ್ಯಕ್ಕೆ 12,000 ಕೋಟಿ ರೂ. ಜಿಎಸ್ಟಿ ಪರಿಹಾರ ರೂಪದಲ್ಲಿ ಹಣ ಬಾಕಿ ಉಳಿದು ಕೊಂಡಿದೆ. ಈ ಹಣದ ಮೇಲೆ ಸಿಎಂ ಬೊಮ್ಮಾಯಿ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ. 2023-24ರಲ್ಲಿ ಜಿಎಸ್ಟಿ ಪರಿಹಾರವಾಗಿ 4,000 ಕೋಟಿ ರೂ. ಮತ್ತು ಮುಂದಿನ ವರ್ಷಗಳಲ್ಲಿ ತಲಾ 2,000 ಕೋಟಿ ರೂ.ನಂತೆ ನಿರೀಕ್ಷೆ ಇರಿಸಲಾಗಿದೆ. ಈ ಪರಿಹಾರ ಮೊತ್ತವನ್ನು ಆದಷ್ಟು ಬೇಗ ಪಾವತಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಿದ್ದಾರೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.