ಕರ್ನಾಟಕ

karnataka

ETV Bharat / state

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿನ ವಾಹನ ಸಂಚಾರ ದಟ್ಟಣೆ ನಿವಾರಣೆಗೆ ಸಿಎಂ ಸೂಚನೆ - ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿನ ವಾಹನ ಸಂಚಾರ ದಟ್ಟಣೆ ನಿವಾರಣೆಗೆ ಸಿಎಂ ಸೂಚನೆ

ಬೆಂಗಳೂರು ನಗರದ ಸಂಚಾರ ಸುವ್ಯವಸ್ಥೆ ಕುರಿತು ಬಿಬಿಎಂಪಿ, ಬಿಡಬ್ಲ್ಯೂಎಸ್​ಎಸ್​ಬಿ ಹಾಗೂ ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ವೇಳೆ ಕೆಲಸದ ಮೇಲುಸ್ತುವಾರಿಯನ್ನು ಖುದ್ದು ಡಿಸಿಪಿಗಳೇ ವಹಿಸಿಕೊಳ್ಳಬೇಕೆಂದು ಸೂಚಿಸಿದರು.

cm-bommai-notice-to-control-traffic-problem-in-bengaluru-roads
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿನ ವಾಹನ ಸಂಚಾರ ದಟ್ಟಣೆ ನಿವಾರಣೆಗೆ ಸಿಎಂ ಸೂಚನೆ

By

Published : Jun 25, 2022, 9:30 PM IST

ಬೆಂಗಳೂರು:ಬೆಂಗಳೂರಿನ ಹೆಬ್ಬಾಳ, ಮಹದೇವಪುರ ಹೊರವರ್ತುಲ ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್, ಸೇಂಟ್ ಜಾನ್ಸ್ ಆಸ್ಪತ್ರೆ, ಭಟ್ಟರಹಳ್ಳಿ ಜಂಕ್ಷನ್, ವೈಟ್‍ಫೀಲ್ಡ್ ರಸ್ತೆಗಳು ಸೇರಿದಂತೆ 10 ಪ್ರಮುಖ ಪ್ರದೇಶಗಳಲ್ಲಿನ ವಾಹನ ಸಂಚಾರ ದಟ್ಟಣೆ ನಿವಾರಿಸುವುದರ ಜೊತೆಗೆ ಟ್ರಾಫಿಕ್ ಸಿಗ್ನಲ್​ಗಳನ್ನು ಸಿಂಕ್ರೋನೈಜ್ ಮಾಡಲು ಕ್ರಮ ಕೈಗೊಳ್ಳುವಂತೆ ಸಿಎಂ ಬೊಮ್ಮಾಯಿ ಸೂಚಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಬೆಂಗಳೂರು ನಗರದ ಸಂಚಾರ ಸುವ್ಯವಸ್ಥೆ ಕುರಿತು ಬಿಬಿಎಂಪಿ, ಬಿಡಬ್ಲ್ಯೂಎಸ್​ಎಸ್​ಬಿ ಹಾಗೂ ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಕೆಲಸದ ಮೇಲುಸ್ತುವಾರಿಯನ್ನು ಖುದ್ದು ಡಿಸಿಪಿಗಳೇ ವಹಿಸಿಕೊಳ್ಳಬೇಕೆಂದು ಸೂಚಿಸಿದರು.

ಸಂಚಾರ ದಟ್ಟಣೆ ನಿವಾರಣೆಗೆ, ನಗರಾಭಿವೃದ್ಧಿ ಮತ್ತು ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಪೊಲೀಸ್ ಆಯುಕ್ತರು, ಬಿಎಂಆರ್‍ಸಿಎಲ್, ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳು ಒಟ್ಟಾಗಿ ಪರಿಹಾರ ಕ್ರಮಗಳನ್ನು ರೂಪಿಸಿ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿನ ಗುಂಡಿ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಕ್ರಮ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಳೆಯಾದಾಗ ನೀರುನುಗ್ಗಿ ಸಂಚಾರ ದಟ್ಟಣೆಯಾಗುತ್ತಿರುವ 50 ಸ್ಥಳಗಳನ್ನು ತಕ್ಷಣ ದುರಸ್ತಿ ಮಾಡಲು ತಿಳಿಸಿದರು.

ಅಗೆದ ರಸ್ತೆ ದುರಸ್ತಿಗೊಳಿಸಿ:ಸಿಬಿಡಿ, ಹೈಡೆನ್ಸಿಟಿ ಕಾರಿಡಾರ್​​ನಲ್ಲಿ 48 ಕೋಟಿ ರೂ. ವೆಚ್ಚದಲ್ಲಿ ಸಿಗ್ನಲ್​ಗಳ ಸಿಂಕ್ರೊನೈಸೇಷನ್ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಬೇಕು. ಇದರಿಂದ ಜನರಿಗೆ ಅನುಕೂಲ ಆಗುತ್ತದೆ. ರಸ್ತೆ ಗುಂಡಿಗಳನ್ನು ಆದ್ಯತೆಯ ಮೇರೆಗೆ ಮುಚ್ಚಬೇಕು. ಬಿಡಬ್ಲ್ಯುಎಸ್​ಎಸ್​ಬಿ, ಬಿಎಂಆರ್​ಸಿಎಲ್​​ನವರು ಕಾಮಗಾರಿಗಾಗಿ ಅಗೆದ ರಸ್ತೆ ಹಾಗೆಯೇ ಇವೆ. ಈ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಆ ರಸ್ತೆಗಳ ದುರಸ್ತಿ ಮಾಡಬೇಕು ಎಂದರು.

ಸಂಚಾರ ಪೊಲೀಸರ ಸಂಖ್ಯಾಬಲ ಹೆಚ್ಚಿಸಿ, ವಾಹನ ದಟ್ಟಣೆ ನಿಯಂತ್ರಣಕ್ಕೆ ಆದ್ಯತೆ ನೀಡಿ ಎಂದು ಡಿಜಿಪಿ ಪ್ರವೀಣ್ ಸೂದ್​ಗೆ ನಿರ್ದೇಶಿಸಿದ ಸಿಎಂ, ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಕಟ್ಟುನಿಟ್ಟಿನ ಕ್ರಮ: ನಿರ್ಭಯಾ ಯೋಜನೆಯಲ್ಲಿ ಅಳವಡಿಸುವ ಕ್ಯಾಮರಾಗಳಲ್ಲಿ ಟ್ರಾಫಿಕ್ ಸಿಗ್ನಲ್​ನಲ್ಲಿ ಆದ್ಯತೆ ಮೇರೆಗೆ ಕ್ಯಾಮರಾ ಅಳವಡಿಸಬೇಕು. ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಮತ್ತು ಹೈಡೆನ್ಸಿಟಿ ರಸ್ತೆಗಳ ಒತ್ತುವರಿ, ಅಡೆತಡೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿರಿ. ನಗರ ಪ್ರದೇಶದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಈ ಕುರಿತು ಕೈಗೊಂಡ ಕ್ರಮಗಳ ಕುರಿತು ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದ ಸಿಎಂ, ತಾವೇ ಖುದ್ದು ವಲಯವಾರು ಸಭೆ ನಡೆಸುವುದಾಗಿ ಹೇಳಿದರು.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ: ಜಿ ಪರಮೇಶ್ವರ್

For All Latest Updates

ABOUT THE AUTHOR

...view details