ಬೆಂಗಳೂರು: ಸಿಎಂ ಭೇಟಿಯಾಗಿ ಕಷ್ಟ ಹೇಳಿಕೊಳ್ಳಲು ಸಿಎಂ ಗೃಹ ಕಚೇರಿ ಬಳಿ ಕಾಯುತ್ತಿದ್ದ ವೃದ್ಧೆಯ ಸಂಕಷ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ಆರ್.ಟಿ ನಗರ ನಿವಾಸದಿಂದ ಗೃಹ ಕಚೇರಿ ಕೃಷ್ಣಾಗೆ ತೆರಳುವಾಗ ಗೇಟ್ ಬಳಿಯಿದ್ದ ವೃದ್ಧೆಯನ್ನು ಕಂಡಿದ್ದಾರೆ. ಈ ವೇಳೆ ಕಾರು ನಿಲ್ಲಿಸುವಂತೆ ಸೂಚನೆ ನೀಡಿ, ವೃದ್ಧೆಯ ಸಮಸ್ಯೆಯನ್ನು ಆಲಿಸಿದರು.
ಮನವಿ ಪತ್ರ ಹಿಡಿದು ಶಬರಿಯಂತೆ ಕಾದ ವೃದ್ಧೆಯ ಮೊಗದಲ್ಲಿ ನಗು ಅರಳಿಸಿದ ಬೊಮ್ಮಾಯಿ - bengaluru Latest News
ಹುಬ್ಬಳಿಯಿಂದ ಬಂದಿದ್ದ ಕಾರ್ಯಕರ್ತರು ಮತ್ತು ವೃದ್ಧೆಯೊಬ್ಬರನ್ನು ನೋಡಿದ ಸಿಎಂ ಬಸವರಾಜ ಬೊಮ್ಮಾಯಿ ಕಾರು ನಿಲ್ಲಿಸಿ, ಸಮಸ್ಯೆ ಆಲಿಸಿದರು.
ಕೈಯಲ್ಲಿ ಮನವಿ ಪತ್ರ ಹಿಡಿದು ಅಹವಾಲು ಸಲ್ಲಿಸಿ ನೆರವು ಪಡೆಯುವ ನಿರೀಕ್ಷೆಯಲ್ಲಿದ್ದ ವೃದ್ದೆಯ ಬಳಿಗೆ ತೆರಳಿ ಮನವಿ ಪತ್ರ ಪಡೆದು ಸಮಸ್ಯೆ ಕೇಳಿದರು. ಕರ್ನೂಲು ಮೂಲದ ವೃದ್ಧೆ ಕಳೆದ 10 ವರ್ಷದಿಂದ ಬೆಂಗಳೂರಿನಲ್ಲೇ ನೆಲೆಸಿದ್ದು ಕೋವಿಡ್ನಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ಪತಿಗೆ ಅನಾರೋಗ್ಯವಾಗಿದ್ದು, ಊರಿಗೆ ವಾಪಸ್ ತೆರಳಲು ಸಹಾಯ ಮಾಡುವಂತೆ ಮನವಿ ಮಾಡಿದರು. ವೃದ್ಧೆಯ ಕಷ್ಟಕ್ಕೆ ಸ್ಪಂದಿಸಿದ ಸಿಎಂ ವೃದ್ಧೆಯ ಸಮಸ್ಯೆ ಪರಿಹರಿಸಲು ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಿಎಂ ಸ್ಪಂದನೆಗೆ ವೃದ್ಧೆ ಸಂತಸಗೊಂಡರು. ನಂತರ ಹುಬ್ಬಳ್ಳಿಯಿಂದ ಬಂದಿದ್ದ ಕಾರ್ಯಕರ್ತರನ್ನು ಮಾತನಾಡಿಸಿದ ಸಿಎಂ ಕೃಷ್ಣಾಗೆ ತೆರಳಿದರು.