ಬೆಂಗಳೂರು: ಕರ್ನಾಟಕವನ್ನು ಹವಾಮಾನ ವೈಪರೀತ್ಯ ನಿರೋಧಕ ರಾಜ್ಯವಾಗಿ ರೂಪಿಸುವಲ್ಲಿ ಜಾಗತಿಕ ಮಟ್ಟದ ಪರಿಣತಿಯನ್ನು ಒದಗಿಸುವಲ್ಲಿ ವಿಶ್ವಬ್ಯಾಂಕ್ ಸಹಯೋಗವನ್ನು ನೀಡುವಂತೆ ವಿಶ್ವಬ್ಯಾಂಕ್ ನಿಯೋಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ, ಕರ್ನಾಟಕ ರಾಜ್ಯವನ್ನು ಹವಾಮಾನ ವೈಪರೀತ್ಯ ನಿರೋಧಕವಾಗಿ ರೂಪಿಸುವ ಕುರಿತಂತೆ ವಿಶ್ವಬ್ಯಾಂಕ್ನ ಭಾರತದ ಕಂಟ್ರಿ ಡೈರೆಕ್ಟರ್ ಆಗಸ್ಟೆ ಟ್ಯಾನೊ ಕೊಮೆ ಅವರ ನೇತೃತ್ವದ ನಿಯೋಗದೊಂದಿಗೆ ಚರ್ಚಿಸಿದರು. ರಾಜ್ಯದಲ್ಲಿ ಕಳೆದ ಒಂದೂವರೆ ದಶಕದಲ್ಲಿ ಮೊದಲ ಏಳೆಂಟು ವರ್ಷ ತೀವ್ರ ಬರ ಪರಿಸ್ಥಿತಿ ಎದುರಾದರೆ, ಕಳೆದ ನಾಲ್ಕೈದು ವರ್ಷಗಳಿಂದ ತೀವ್ರ ಪ್ರವಾಹ, ಭೂಕುಸಿತ, ಸಮುದ್ರ ಕೊರೆತದಂತಹ ಪರಿಸ್ಥಿತಿ ತಲೆದೋರಿದೆ.
ಒಂದೇ ವರ್ಷ ಪ್ರವಾಹ ಹಾಗೂ ಬರ ಪರಿಸ್ಥಿತಿಯನ್ನು ಎದುರಿಸಿದ ದಾಖಲೆಗಳೂ ರಾಜ್ಯದಲ್ಲಿವೆ. ಇದರಿಂದ ರಾಜ್ಯದಲ್ಲಿ ಬೆಳೆ, ಸಾರ್ವಜನಿಕ ಆಸ್ತಿಪಾಸ್ತಿಗೆ ತೀವ್ರ ನಷ್ಟವಾಗುವುದರೊಂದಿಗೆ ಜನಜೀವನವೇ ಅಸ್ತವ್ಯಸ್ತಗೊಳ್ಳುತ್ತಿದೆ. ಜೀವನೋಪಾಯಕ್ಕೆ ಅಡ್ಡಿಯುಂಟಾಗುತ್ತಿದೆ. ಇದಲ್ಲದೆ ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಅತಿ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಶಾಶ್ವತ ಪರಿಹಾರ ಹಾಗೂ ವಿಪತ್ತು ನಿರ್ವಹಣೆಗೆ ಸೂಕ್ತ ಪೂರ್ವ ತಯಾರಿಯನ್ನು ಮಾಡಿಕೊಳ್ಳುವ ವ್ಯವಸ್ಥೆ ರೂಪಿಸಲು ಉದ್ದೇಶಿಸಿದೆ ಎಂದು ನಿಯೋಗಕ್ಕೆ ಸಿಎಂ ಮಾಹಿತಿ ನೀಡಿದರು.
ರಾಜ್ಯದಲ್ಲಿ ಬೆಂಗಳೂರು ನಗರ ಪ್ರವಾಹ ನಿರ್ವಹಣೆ, ಬರ ಪರಿಸ್ಥಿತಿ ನಿರ್ವಹಣೆ, ಕಡಲಕೊರೆತದ ನಿರ್ವಹಣೆ ಹಾಗೂ ವಿಪತ್ತಿನ ಅಪಾಯವನ್ನು ತಗ್ಗಿಸುವುದು ಹಾಗೂ ವಿಪತ್ತು ನಿರ್ವಹಣೆಯ ವಿಷಯಗಳಲ್ಲಿ ವಿಶ್ವಬ್ಯಾಂಕಿನ ಸಹಯೋಗವನ್ನು ನಿರೀಕ್ಷಿಸುತ್ತಿದ್ದು, ಅದರಲ್ಲೂ ಬೆಂಗಳೂರು ಪ್ರವಾಹ ನಿರ್ವಹಣೆ ಹಾಗೂ ಕಡಲ ಕೊರೆತದ ನಿರ್ವಹಣೆ ಕುರಿತು ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು. ಯೋಜನೆಗೆ ಸಂಬಂಧಿಸಿದಂತೆ ತ್ವರಿತವಾಗಿ ಒಪ್ಪಂದ ಮಾಡಿಕೊಂಡು, ನಿಗದಿತ ಕಾಲಮಿತಿಯಲ್ಲಿ ಯೋಜನೆ ಜಾರಿಗೊಳಿಸಲು ಎಲ್ಲ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.